Simultaneous supply of mangoes to the market, fruit prices fall
x

ಮಾರುಕಟ್ಟೆಗೆ ಬಂದಿರುವ ಮಾವಿನ ಹಣ್ಣು.

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ: ಬೆಲೆ ವ್ಯತ್ಯಾಸದ ಮೊತ್ತ ಪಾವತಿಗೆ ಕೇಂದ್ರ, ರಾಜ್ಯ ಒಪ್ಪಿಗೆ

2.5 ಲಕ್ಷ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ.


ನಿರಂತರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಿದೆ. ಮಾವಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವು ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸಮ್ಮತಿ ನೀಡಿದೆ. ಇದರ ಪರಿಣಾಮವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪ್ರತಿ ಕೆ.ಜಿ.ಗೆ ತಲಾ ಎರಡೆರಡು ರೂಪಾಯಿಗಳಂತೆ ಒಟ್ಟು 4 ರೂಪಾಯಿ ಬೆಲೆ ವ್ಯತ್ಯಾಸವನ್ನು ಪಾವತಿಸಿ, ಮಾವು ಮಾರುಕಟ್ಟೆಗೆ ಚೈತನ್ಯ ತುಂಬಲು ಸಿದ್ಧತೆ ನಡೆಸಿವೆ.

ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಡಿಯೋ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾವು ಬೆಳೆಗಾರರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. 2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಮಾವಿಗೆ 'ಬೆಲೆ ಬೆಂಬಲ ಯೋಜನೆ' (PDPS - Price Deficiency Payment Scheme) ಅನುಷ್ಠಾನಕ್ಕೆ ಸಚಿವ ಚಲುವರಾಯಸ್ವಾಮಿ ಮಾಡಿದ ಮನವಿಗೆ ಕೇಂದ್ರ ಕೃಷಿ ಸಚಿವರೂ ಸಹ ಸಮ್ಮತಿ ನೀಡಿದ್ದರು.

ಇನ್ನು, 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮಾವಿನ ಇಳುವರಿ, ಬೆಲೆ ಕುಸಿತ

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. 2025-26ನೇ ಋತುವಿನಲ್ಲಿ ರಾಜ್ಯದಲ್ಲಿ ಸುಮಾರು 1.39 ಲಕ್ಷ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಬಾರಿ ಅಂದಾಜು 08 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ರಾಜ್ಯದ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ.

ಕರ್ನಾಟಕದಲ್ಲಿ, ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ, ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ. ಮೇ 2025 ರಲ್ಲಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಮಾದರಿ ಬೆಲೆಗಳು ಕ್ವಿಂಟಲ್‌ಗೆ 1,200 ರಿಂದ 2,500 ರೂ. ರವರೆಗೆ ಇತ್ತು. ಆದರೆ, ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ತಳಿಯ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ ಕೇವಲ 450- 550 ರೂಪಾಯಿಗೆ ಕುಸಿದಿರುವುದು ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ3,460 ರೂಪಾಯಿ ಮತ್ತು C-3 ವೆಚ್ಚಕ್ಕೆ 5,466 ರೂಪಾಯಿ ಎಂದು ಶಿಫಾರಸು ಮಾಡಿದೆ. ಈ ಬೆಲೆ ಕುಸಿತವನ್ನು ನಿಯಂತ್ರಿಸಲು 11 ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಮತ್ತು 13ರಂದು ಸ್ಪಷ್ಟೀಕರಣಗಳಿಗೆ ಉತ್ತರವನ್ನು ನೀಡಲಾಗಿತ್ತು. ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು PDPS ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.

Read More
Next Story