BSY Pocso Case | ಬಿಎಸ್‌ವೈ ಜಾಮೀನು ಷರತ್ತಿನಲ್ಲಿ ಸಡಿಲಿಕೆ; ಆಕ್ಷೇಪಣೆ ಸಲ್ಲಿಕೆಗೆ ಆದೇಶ
x

BSY Pocso Case | ಬಿಎಸ್‌ವೈ ಜಾಮೀನು ಷರತ್ತಿನಲ್ಲಿ ಸಡಿಲಿಕೆ; ಆಕ್ಷೇಪಣೆ ಸಲ್ಲಿಕೆಗೆ ಆದೇಶ

ಬಿಎಸ್‌ ಯಡಿಯೂರಪ್ಪ ಮೇಲಿನ ಪ್ರವಾಸ ನಿರ್ಬಂಧದಲ್ಲಿ ಸಡಿಲಿಕೆ ಮಾಡಬಹುದೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.


ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಾಮೀನು ಷರತ್ತಿನಲ್ಲಿ ಸಡಿಲಿಕೆ ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಪೋಕ್ಸೊ ಪ್ರಕರಣದಲ್ಲಿ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯ ಸಂಜ್ಞೇ ಪರಿಗಣನೆ ರದ್ದತಿ ಮತ್ತೆ ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ಹೊರಡಿಸಿದ್ದ ಆದೇಶದಲ್ಲಿ ಸ್ಪಷ್ಟನೆ ಹಾಗೂ ನಿರೀಕ್ಷಣಾ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಯಡಿಯೂರಪ್ಪ ಪರ ವಕೀಲರು “ಬಿಎಸ್‌ವೈ ಹಿರಿಯ ರಾಜಕಾರಣಿಯಾಗಿದ್ದು, ಮೇಲಿಂದ ಮೇಲೆ ಅವರು ಪ್ರವಾಸ ಕೈಗೊಳ್ಳಬೇಕಿದೆ. ಪ್ರತಿ ಕ್ಷಣ ಮತ್ತು ಪ್ರತಿ ನಿಮಿಷಕ್ಕೂ ಅನುಮತಿ ಕೋರಲು ಬಿಎಸ್‌ವೈ ವಿಚಾರಣಾಧೀನ ನ್ಯಾಯಾಲಯಕ್ಕೆ ಹೋಗಲಾಗದು. ರಾಜಕೀಯ ಪಕ್ಷದ ಹಿರಿಯ ಸದಸ್ಯರಾಗಿರುವ ಅವರು ರಾಜ್ಯ ಮತ್ತು ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕಿದೆ,” ಎಂದರು.

ಈ ವೇಳೆ ನ್ಯಾಯಪೀಠವು, ಯಡಿಯೂರಪ್ಪ ಅವರು ಇದನ್ನು ಮೊದಲೇ ಯೋಚಿಸಬೇಕಿತ್ತು. ಹಿರಿಯ ರಾಜಕೀಯ ನಾಯಕರು ಇಂಥವೆಲ್ಲಾವನ್ನು ಮೀರಿ ವರ್ತಿಸಬೇಕು. ಇಂಥ ಅಹಿತರಕರ ಘಟನೆಗಳಲ್ಲಿ ಭಾಗಿಯಾಗುವುದಕ್ಕೂ ಮುನ್ನ ಅವರಿಗೆ ಅರಿವಿರಬೇಕಿತ್ತು” ಎಂದಿತು.

ಆಗ ಬಿಎಸ್‌ವೈ ಪರ ವಕೀಲರು “ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪ ಸುಳ್ಳು. ಆರೋಪದಲ್ಲಿ ಹುರುಳಿಲ್ಲ” ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗ ಪೀಠವು, ಬಿಎಸ್‌ವೈ ಮೇಲಿನ ಪ್ರವಾಸ ನಿರ್ಬಂಧದಲ್ಲಿ ಸಡಿಲಿಕೆ ಮಾಡಬಹುದೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

“ಪ್ರಾಸಿಕ್ಯೂಷನ್‌ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲಿಯವರೆಗೆ ಯಡಿಯೂರಪ್ಪ ಅವರಿಗೆ ವಿಧಿಸಲಾಗಿರುವ ಪ್ರವಾಸ ನಿರ್ಬಂಧ ಮುಂದುವರಿಯಲಿದೆ” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

Read More
Next Story