ಕರಾವಳಿಯಲ್ಲಿ ರೆಡ್‌ ಅಲರ್ಟ್‌ | ಭಾರಿ ಮಳೆ: ಮಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ಥ
x

ಕರಾವಳಿಯಲ್ಲಿ ರೆಡ್‌ ಅಲರ್ಟ್‌ | ಭಾರಿ ಮಳೆ: ಮಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ಥ


ಮಂಗಳೂರು ನಗರದಲ್ಲಿ ಮಂಗಳವಾರ ಮಳೆಯ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮುಂದಿನ 24 ತಾಸು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ರೆಡ್‌ ಅಲರ್ಟ್‌ ಘೋಷಿಸಿದೆ.

ನಗರದ ಪಿವಿಎಸ್‌ ವೃತ್ತ, ಕೊಡಿಯಾಲ್‌ಬೈಲ್‌ ಪ್ರದೇಶಗಳಲ್ಲಿ ರಸ್ತೆಯಲ್ಲಿಯೇ ನೀರು ತುಂಬಿದೆ. ಕೊಟ್ಟಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿಯೂ ನೀರು ತುಂಬಿದ್ದು ತೊಕ್ಕೊಟ್ಟು, ಕಾಸರಗೋಡು ಕಡೆಗೆ ಹೋಗುವ ವಾಹನಗಳು ತೊಂದರೆಗೊಳಗಾದವು. ಪಡೀಲ್ ರೈಲ್ವೇ ಅಂಡರ್ ಪಾಸ್ ನಲ್ಲಿ ನೀರು ನಿಂತಿದ್ದು ಇದರ ನಡುವೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಸಿಲುಕಿದೆ. ಬಸ್‌ನ ಎಂಜಿನ್‌ಒಳಗೆ ನೀರು ನುಗ್ಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿದೆ. ಬೆಳಗ್ಗೆ ನದಿ ನೀರಿನ ಮಟ್ಟ 8.2 ಮೀಟರ್‌ಗೆ ಏರಿದೆ. ಉಪ್ಪಿನಂಗಡಿಯ ನೇತ್ರಾವತಿ- ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದ್ದು, ಸಂಗಮ ಪ್ರದೇಶದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ನದಿ ಮುಖವಾಗಿರುವ ಮೆಟ್ಟಲುಗಳು ಜಲಾವೃತವಾಗಿವೆ. ನದಿಗಳು ತುಂಬಿ ಹರಿದ ಕಾರಣ ದೇಗುಲದ ಅರ್ಚಕರು ಮತ್ತು ಭಕ್ತರು ನದಿಗೆ ಪೂಜೆ ಸಲ್ಲಿಸಿ, ಮೆಟ್ಟಿಲ ಬಳಿ ಮುಳುಗಿ ಹಾಕಿ ಭಕ್ತಿ ಅರ್ಪಿಸಿದರು.


ಬಂಟ್ವಾಳದಲ್ಲಿ ಈಗಾಗಲೇ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಮಾಣಿ - ಮೈಸೂರು ಹೆದ್ದಾರಿ ಬಂದ್

ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೌಡಿಚಾರ್ ಸಮೀಪ ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿ ಸಂಚಾರ ಬಂದ್ ಆಗಿದೆ. ಬೆಳಿಗ್ಗೆ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ರಸ್ತೆ ಮೇಲೆ ಜರಿದಿದೆ. ಸದ್ಯ ವಾಹನಗಳು ವಾಹನಗಳು ಪಟ್ಟೆ - ರೆಂಜ ಮಾರ್ಗವಾಗಿ, ಕೌಡಿಚಾರ್‌ನಿಂದ ಕೆಯ್ಯೂರು ಮಾರ್ಗವಾಗಿ ಓಡಾಡುತ್ತಿವೆ.

ಶಿರಾಡಿ ಘಾಟಿಯಲ್ಲೂ ಭೂಕುಸಿತ

ಶಿರಾಡಿಯಲ್ಲೂ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಮಣ್ಣಿನೆಡೆಯಲ್ಲಿ ಲಾರಿ ಮತ್ತು ಕಾರು ಸಿಲುಕಿವೆ.

ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Read More
Next Story