Recruitment season begins in the state, government orders to issue new notification
x
ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರಿಗಳಿಗೆ ʼನೇಮಕ ಪರ್ವʼ: ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಆದೇಶ

ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಸರ್ಕಾರದ ಈ ಆದೇಶದಿಂದ ತರಬೇತಿ ಕೇಂದ್ರಗಳು ಹಾಗೂ ಗ್ರಂಥಾಲಯಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.


Click the Play button to hear this message in audio format

ರಾಜ್ಯದ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಕಳೆದ ಒಂದು ವರ್ಷದಿಂದ ಒಳ ಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆಯಿಂದಾಗಿ ತಡೆಹಿಡಿಯಲಾಗಿದ್ದ ಹೊಸ ನೇಮಕಾತಿಗಳಿಗೆ ರಾಜ್ಯ ಸರ್ಕಾರವು ಇದೀಗ ಹಸಿರು ನಿಶಾನೆ ತೋರಿದೆ. ಹೊಸ ರೋಸ್ಟರ್ ಪದ್ಧತಿಯನ್ನು ಅಳವಡಿಸಿ ನೇಮಕಾತಿ ಪ್ರಕ್ರಿಯೆಯನ್ನು ಪುನರಾರಂಭಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಎಲ್ಲಾ ಇಲಾಖೆಗಳು, ನಿಗಮ-ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ಅಧಿಕೃತವಾಗಿ ಸೂಚನೆ ನೀಡಿದೆ.

ಈ ಮಹತ್ವದ ನಿರ್ಧಾರದಿಂದಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿದೆ. ಈಗಾಗಲೇ ತರಬೇತಿ ಕೇಂದ್ರಗಳು ಮತ್ತು ಗ್ರಂಥಾಲಯಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯ ಪುನರಾರಂಭವು ಅವರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

ಸರ್ಕಾರದ ಈ ಆದೇಶದ ಬೆನ್ನಲ್ಲೇ, ಆರ್ಥಿಕ ಇಲಾಖೆಯು ಈಗಾಗಲೇ 25,000ಕ್ಕೂ ಹೆಚ್ಚು ಹುದ್ದೆಗಳಿಗೆ ತನ್ನ ಅನುಮೋದನೆಯನ್ನು ನೀಡಿದೆ. ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳು ಸಲ್ಲಿಸುವ ನೇಮಕಾತಿ ಪ್ರಸ್ತಾವನೆಗಳಿಗೆ ಆದ್ಯತೆಯ ಮೇಲೆ ಆರ್ಥಿಕ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವುದರಿಂದ, ಮುಂಬರುವ ದಿನಗಳಲ್ಲಿ ಸಾವಿರಾರು ಹೊಸ ಹುದ್ದೆಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಿಂದ ರಾಜ್ಯದಲ್ಲಿ ನೇಮಕಾತಿಗಳ ಸುಗ್ಗಿ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ವಿವಿಧ ಇಲಾಖೆಗಳಿಂದ ಒಂದರ ನಂತರ ಒಂದರಂತೆ ಅಧಿಸೂಚನೆಗಳು ಹೊರಬೀಳುವ ನಿರೀಕ್ಷೆಯಿದ್ದು, ವರ್ಷಗಳಿಂದ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ತಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.

ಕಾನ್‌ಸ್ಟೇಬಲ್‌ ಹುದ್ದೆಗೆ ವಯೋಮಿತಿ ಹೆಚ್ಚಳ

ರಾಜ್ಯದಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಹೊರಡಿಸುವ ನೇಮಕ ಅಧಿಸೂಚನೆಗೆ ಸಾಮಾನ್ಯ ವರ್ಗಕ್ಕೆ 25 ವರ್ಷ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ 27 ವರ್ಷ ನಿಗದಿಪಡಿಸಿ ನೇಮಕ ನಡೆಸುತ್ತಿತ್ತು. ಆದರೆ ಕೋವಿಡ್‌ ಸಮಯದಲ್ಲಿ ಸರ್ಕಾರ ಯಾವುದೇ ನೇಮಕಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ. ಆದ್ದರಿಂದ ವಿದ್ಯಾರ್ಥಿ ಸಂಘಟನೆಗಳು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಬೇಕು. ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸಾಮನ್ಯ ವರ್ಗಕ್ಕೆ 30 ವರ್ಷ ಹಾಗೂ ಒಬಿಸಿ, ಎಸ್ಸಿ ಹಾಗೂ ಎಸ್‌ಟಿ ವರ್ಗಕ್ಕೆ 35 ವರ್ಷ ನಿಗದಿಪಡಿಸಿವೆ. ಆದ್ದರಿಂದ ರಾಜ್ಯ ಸರ್ಕಾರ ವಯೋಮಿತಿ ಹೆಚ್ಚಿಸಬೇಕೆಂದು ಸಿಎಂ, ಗೃಹ ಸಚಿವರಿಗೆ ಮನವಿ ಮಾಡಲಾಗಿತ್ತು.

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಸರ್ಕಾರ, ವಿವಿಧ ರಾಜ್ಯಗಳಲ್ಲಿರುವ ವಯೋಮಿತಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ 27 ವರ್ಷ ಹಾಗೂ ಒಬಿಸಿ, ಎಸ್ಸಿ ಮತ್ತು ಎಸ್‌ಟಿ ವರ್ಗಗಳಿಗೆ 30 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ಒಳ ಮೀಸಲಾತಿ ತಾರ್ಕಿಕ ಅಂತ್ಯ ಕಾಣಲಿ

ನಮ್ಮ ಫಾರಸೈಟ್‌ ತರಬೇತಿ ಕೇಂದ್ರದ ನಿರ್ದೇಶಕ ತೌಸಿಫ್‌ ಪಾಷ ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, "ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಿ ಆದೇಶಿಸಿದ್ದು, ಪ್ರವರ್ಗ ʼಸಿʼ ಗೆ ಶೇ.5 ಮೀಸಲಾತಿ ನೀಡಿದೆ. ಆದರೆ ಸರ್ಕಾರದ ಈ ನಿರ್ಧಾರದ ವಿರುದ್ಧ ಅಲೆಮಾರಿ ಸಮುದಾಯ ಹೋರಾಟ ನಡೆಸುತ್ತಿದ್ದು, ಹೈಕೋರ್ಟ್‌ಗೆ ಹೋಗವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕೋರ್ಟ್‌ ಮೀಸಲಾತಿ ಕುರಿತು ತಡೆಯಾಜ್ಞೆ ನೀಡಿದರೆ ನೇಮಕಗಳು ಮತ್ತಷ್ಟು ವಿಳಂಬವಾಗಲಿವೆ. ಆದ್ದರಿಂದ ಸರ್ಕಾರ ಮೊದಲು ಒಳ ಮೀಸಲಾತಿಗೆ ತಾರ್ಕಿಕ ಅಂತ್ಯ ಕಾಣಿಸಿ, ನಂತರ ನೇಮಕಾತಿಗಳಿಗೆ ಚಾಲನೆ ನೀಡಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶ ಎಲ್ಲಾ ಸ್ಪರ್ಧಾರ್ಥಿಗಳಲ್ಲಿ ಭರವಸೆ ಮೂಡಿಸಿದೆ. 2011 ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿ ವಿಳಂಬವಾದಂತೆ ಬೇರೆ ಅಧಿಸೂಚನೆಗಳು ವಿಳಂಬವಾಗುವುದು ಬೇಡ. ಆದ್ದರಿಂದ ಸರ್ಕಾರ ಒಳಮೀಸಲಾತಿ ಗೊಂದಲಕ್ಕೆ ತೆರೆ ಎಳೆದು ನೇಮಕಾತಿ ಆರಂಭಿಸಬೇಕು" ಎಂದು ತಿಳಿಸಿದರು.

ಸರ್ಕಾರ ನೇಮಕಾತಿಗೆ ವೇಗ ನೀಡಲಿ

"ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸ್ಪರ್ಧಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಕಳೆದೊಂದು ವರ್ಷದಿಂದ ಯಾವುದೇ ನೇಮಕಾತಿಗಳು ನಡೆದಿಲ್ಲ. ಇದೀಗ ಸರ್ಕಾರ ನಿಗಮ ಮಂಡಳಿಗಳು ಹಾಗೂ ಪರೀಕ್ಷಾ ಪ್ರಾಧಿಕಾರಗಳಿಗೆ ನೇಮಕಾತಿ ನಡೆಸುವಂತೆ ತಿಳಿಸಿರುವುದು ಎಲ್ಲರಿಗೂ ಅನುಕೂಲವಾಗಲಿದೆ. ಪೊಲೀಸ್‌, ಶಿಕ್ಷಣ ಇಲಾಖೆ, ಗ್ರೂಪ್‌ ʼಸಿʼ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ದೆಗಳಿಗೆ ಆದಷ್ಟು ಶೀಘ್ರವಾಗಿ ಅಧಿಸೂಚನೆ ಹೊರಡಿಸಬೇಕು" ಎಂದು ಚಿಕ್ಕಮಗಳೂರಿನ ದೀಕ್ಷಿತ್‌ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ʼನೇಮಕಾತಿ ಸುಗ್ಗಿʼ

"ಒಳ ಮೀಸಲಾತಿ ಜಾರಿಯ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರವು ಇದೀಗ ಚಾಲನೆ ನೀಡಿದೆ. ಹೊಸ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು, ನೇರ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸುವಂತೆ ಸರ್ಕಾರ ಆದೇಶಿಸಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ," ಎಂದು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಂಕೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

"ಈ ನಿರ್ಧಾರದಿಂದಾಗಿ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇ.33 ರಷ್ಟು ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ. ವರ್ಷಗಳಿಂದ ಯಾವುದೇ ನೇಮಕಾತಿ ಇಲ್ಲದೆ ಕಾಯುತ್ತಿದ್ದ ಸ್ಪರ್ಧಾರ್ಥಿಗಳು, ಸರ್ಕಾರದ ಈ ಆದೇಶದಿಂದಾಗಿ ತಮ್ಮ ಪರೀಕ್ಷಾ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಇದು ಸೂಕ್ತ ಸಮಯ," ಎಂದು ಅವರು ಹೇಳಿದರು.

ಪ್ರಾಧಿಕಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗಲಿ

ಗ್ರೂಪ್‌ ʼಸಿʼ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿ ಮಮತಾ ಗೌಡ ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, " ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳು, ವಿಳಂಬ ಹಾಗೂ ಭ್ರಷ್ಟಾಚಾರದ ಸುತ್ತಲೇ ತಿರುಗುತ್ತಿವೆ. ಪೊಲೀಸ್‌ ಇಲಾಖೆ ನಡೆಸಿದ 545 ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಾಗೂ ಕೆಪಿಎಸ್‌ಸಿ 25 ಎಂಜಿನಿಯರ್‌ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಲಾಗಿತ್ತು. ಇದರಿಂದ ಸ್ಪರ್ಧಾರ್ಥಿಗಳ ಮನೋಬಲ ಕುಸಿಯುವಂತಾಗಿದೆ. ಕೆಲವು ನೇಮಕಾತಿಗಳು ಪೂರ್ಣಗೊಳ್ಳಲು ಕನಿಷ್ಠ 3-5 ವರ್ಷಗಳವರೆಗೂ ಸಮಯ ತೆಗೆದುಕೊಳ್ಳುತ್ತಿವೆ. ಆದ್ದರಿಂದ ವಿಳಂಬ ನೀತಿ ಅನುಸರಿಸದೆ ಎಲ್ಲಾ ನೇಮಕಾತಿಗಳು ನಿಗದಿತ ಕಾಲಮಿತಿಯಲ್ಲಿ ಯಾವುದೇ ಲೋಪವಾಗದಂತೆ ನಡೆಯಬೇಕು. ನೈಜ ಪ್ರತಿಭಾವಂತರಿಗೆ ಹುದ್ದೆಗಳು ದೊರಕಬೇಕು" ಎಂದರು.

ಅಧಿಸೂಚನೆಗೆ ಸಿದ್ಧವಿರುವ ಹುದ್ದೆಗಳು

ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಹಲವು ಇಲಾಖೆಗಳು ಸಿದ್ದತೆ ನಡೆಸಿವೆ. ಪದವಿ ಪೂರ್ವ ಕಾಲೇಜಿನ 804 ಉಪನ್ಯಾಸಕ ಹುದ್ದೆಗಳು, 2,000 ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹುದ್ದೆಗಳು, ವಸತಿ ಶಾಲೆಯಲ್ಲಿ 875 ಹುದ್ದೆಗಳು, ಅಬಕಾರಿ ಇಲಾಖೆಯ 268 ಉಪ ನಿರೀಕ್ಷಕರು, 677 ಅಬಕಾರಿ ಪೇದೆ, 16,000 ಶಿಕ್ಷಕರು, 600 ಪೊಲೀಸ್ ಇನ್​ಸ್ಪೆಕ್ಟರ್, 4,000ಕ್ಕೂ ಹೆಚ್ಚು ಪೊಲೀಸ್ ಪೇದೆ, ವಿವಿಧ ಇಲಾಖೆಗಳಲ್ಲಿ 1,000ಕ್ಕೂ ಹೆಚ್ಚು ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು ಅಧಿಸೂಚನೆಗೆ ಸಿದ್ದವಾಗಿದ್ದು, ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ.

ಖಾಲಿ ಇರುವ ಹುದ್ದೆಗಳು

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5,11,272 ಹುದ್ದೆಗಳು ಭರ್ತಿಯಾಗಿವೆ. ಉಳಿದ 2,58,709 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ 58,298, ಒಳಾಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಸಹಕಾರ ಇಲಾಖೆಯಲ್ಲಿ 4,855 , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 , ಉನ್ನತ ಶಿಕ್ಷಣ ಇಲಾಖೆಯಲ್ಲಿ13,227, ಗೃಹ ಇಲಾಖೆಯಲ್ಲಿ 20,000 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ 6,191 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಬಜೆಟ್‌ ಅಧಿವೇಶನದಲ್ಲಿ ತಿಳಿಸಿತ್ತು.

Read More
Next Story