ಸಿವಿಲ್ ಸೇವೆಯ ಹುದ್ದೆಗಳ ನೇಮಕಾತಿ ; ಅಧಿಸೂಚನೆ ಹೊರಡಿಸದಂತೆ ಸುತ್ತೋಲೆ
2024 ನವೆಂಬರ್ 28ರ ನಂತರ ನೇರ ನೇಮಕಾತಿ ಅಥವಾ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆ ಹೊರಡಿಸಿದ್ದಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾಯ ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.
ರಾಜ್ಯ ಸಿವಿಲ್ ಸೇವೆಯ ಹುದ್ದೆಗಳ ನೇಮಕಕ್ಕೆ ಹೊಸ ಅಧಿಸೂಚನೆ ಹೊರಡಿಸದಂತೆ ರಾಜ್ಯ ಸರ್ಕಾರ ಮೂರನೇ ಬಾರಿಗೆ ಸುತ್ತೋಲೆ ಹೊರಡಿಸಿದೆ. ಸಿವಿಲ್ ಸೇವೆಗೆ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25ರಂದು ಸುತ್ತೋಲೆ ಹೊರಡಿಸಿತ್ತು. ಆದರೂ ಕೆಲವು ನೇಮಕ ಪ್ರಾಧಿಕಾರಿಗಳು ಈ ಸೂಚನೆ ಉಲ್ಲಂಘಿಸಿ ನೇರ ನೇಮಕ ಮಾಡಲು ಹೊಸ ಅಧಿಸೂಚನೆ ಹೊರಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.
2024 ನವೆಂಬರ್ 28ರ ನಂತರ ನೇರ ನೇಮಕಾತಿ ಅಥವಾ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆ ಹೊರಡಿಸಿದ್ದಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾಯ ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.
ಬ್ಯಾಕ್ ಲಾಕ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತಿರುವ ಕುರಿತು ಮಾಜಿ ಸಚಿವ ಎಚ್. ಆಂಜನೇಯ ಹಾಗೂ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಾಗ ಎರಡನೇ ಬಾರಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಈಗ ಮೂರನೇ ಬಾರಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.