
ಚಿಕ್ಕಮಗಳೂರು | ಪರಿಷತ್ ಚುನಾವಣೆ ವಿವಾದ: ಮರು ಮತ ಎಣಿಕೆಗೆ ಸಜ್ಜು, ಉಪಸಭಾಪತಿಗೆ ಸಂಕಷ್ಟ
ಚಿಕ್ಕಮಗಳೂರಿನಲ್ಲಿ 2021 ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾವಣೆಗೊಂಡಿರುವ ಮತಗಳ ಮರು ಎಣಿಕೆಯನ್ನು ಜಿಲ್ಲಾಡಳಿತ ಫೆ.28 ರಂದು ನಡೆಸಲಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿಯಾಗಿರುವ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರಿಗೆ ಸಂಕಷ್ಟ ಎದುರಾಗಿದೆ.
ಚಿಕ್ಕಮಗಳೂರಿನಲ್ಲಿ 2021 ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾವಣೆಗೊಂಡಿರುವ ಮತಗಳ ಮರು ಎಣಿಕೆಯನ್ನು ಜಿಲ್ಲಾಡಳಿತ ಫೆ.28 ರಂದು ನಡೆಸಲಿದೆ. ಮೂರು ವರ್ಷಗಳ ಹಿಂದೆ ನಡೆದಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಕೇವಲ ಆರು ಮತಗಳಿಂದ ಆಯ್ಕೆಯಾಗಿದ್ದರು. ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು ಆ ಆಯ್ಕೆಯನ್ನು ಪ್ರಶ್ನಿಸಿ ಮತಗಳ ಮರು ಎಣಿಕೆ ಕೋರಿದ್ದರು. ಆದರೆ, ಅಂದಿನ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ.ಎನ್.ರಮೇಶ್ ಅವರು ಗಾಯತ್ರಿ ಅವರ ಮನವಿ ತಿರಸ್ಕರಿಸಿ, ಫಲಿತಾಂಶ ಘೋಷಿಸಿದ್ದರು.
ಹೈಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಪಟ್ಟಣ ಪಂಚಾಯಿತಿಗಳ ಒಟ್ಟು 12 ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದಾರೆ. ಆದರೆ, ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಲು ನಾಮನಿರ್ದೇಶಿತ ಸದಸ್ಯರು ಅರ್ಹರಲ್ಲ. ಹಾಗಾಗಿ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 12 ಸದಸ್ಯರ ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ನಡೆಸಿ ವರದಿ ನೀಡುವಂತೆ ಇತ್ತೀಚೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಮಾ.7 ರೊಳಗೆ ಮತಗಳ ಮರು ಎಣಿಕೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಸುಪ್ರೀಂನಲ್ಲೂ ಪ್ರಾಣೇಶ್‌ಗೆ ಹಿನ್ನಡೆ
ವಿಧಾನ ಪರಿಷತ್ ಚುನಾವಣೆಯ ಮತಗಳ ಮರು ಎಣಿಕೆಗೆ ಸೂಚಿಸಿದ್ದ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧ 2025ರ ಜ. 29 ರಂದು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರ ಪೀಠ, ಮಾ.4 ರೊಳಗೆ ಮರು ಮತ ಎಣಿಕೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತಗಳ ಮರು ಎಣಿಕೆಗೆ ಅಗತ್ಯ ಸಿದ್ಧತೆ ನಡೆಸಿದೆ.
ಚುನಾವಣೆಯಲ್ಲಿ ಅಂದು ಆಗಿದ್ದೇನು?
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ 2021ರ ಡಿ. 10ರಂದು ಮತದಾನ ನಡೆದಿತ್ತು. 14ರಂದು ಮತ ಎಣಿಕೆ ನಡೆದಿತ್ತು. ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು, ಅವುಗಳಲ್ಲಿ 39 ಮತಗಳು ಅಸಿಂಧುವಾಗಿದ್ದವು. ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು 1,188 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನು ಪಡೆದಿದ್ದರು. ಪ್ರಾಣೇಶ್ ಅವರು ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಮರು ಮತ ಎಣಿಕೆಗೆ ಸಿದ್ಧತೆ
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮರು ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಈ ಸಂಬಂಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
“ಮರು ಮತ ಎಣಿಕೆಗೆ ನ್ಯಾಯಾಲಯ ಆದೇಶಿಸಿದ್ದು, ಫೆ.28 ರಂದು ಮರು ಮತ ಎಣಿಕೆ ನಡೆಸಲಾಗುವುದು. ಮರು ಎಣಿಕೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗುವುದು" ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಅಂದಿನ ಚುನಾವಣೆಗೆ ಸ್ಪರ್ಧಿಸಿದ್ದ ಇತರೆ ಅಭ್ಯರ್ಥಿಗಳಾದ ಆಮ್ ಆದ್ಮಿ ಪಕ್ಷದ ಡಾ.ಕೆ.ಸುಂದರಗೌಡ, ಪಕ್ಷೇತರರಾದ ಬಿ.ಟಿ.ಚಂದ್ರಶೇಖರ, ಜಿ.ಐ.ರೇಣುಕುಮಾರ ಅವರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ.
ವಿಧಾನ ಪರಿಷತ್ ಚುನಾವಣೆಗೆ ಇವಿಎಂ ಯಂತ್ರದ ಬದಲಿಗೆ ಮತಪತ್ರಗಳನ್ನು ಬಳಸಲಾಗಿತ್ತು. ಖಜಾನೆಯಲ್ಲಿರುವ ಮತ ಪತ್ರಗಳನ್ನು ಮರು ಎಣಿಕೆ ಮಾಡಿದ ಬಳಿಕ ಜಿಲ್ಲಾಡಳಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಹೈಕೋರ್ಟ್ ಮುಂದಿನ ವಿಚಾರಣೆಯಲ್ಲಿ ವಿಜೇತರನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.