Covid-19 scam | ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು
x

Covid-19 scam | ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು

ಕಾಯ್ದೆಯಡಿ ಮೂಲ ಖರೀದಿ ನಿಯಮ ಮತ್ತು ಕಾರ್ಯವಿಧಾನ ಅನುಸರಿಸದೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ನಿರ್ದೇಶನದ ಮೇರೆಗೆ ಪಿಪಿಇ ಕಿಟ್‌ ಖರೀದಿಸಲಾಗಿದೆ. ಸಾಮಗ್ರಿ ಖರೀದಿಯಲ್ಲಿನ ಅಕ್ರಮದ ಲಾಭ ಪಡೆಯುವ ಉದ್ದೇಶದಿಂದ ತಮಗೆ ಬೇಕಾದ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂದು ವರದಿ ಆರೋಪಿಸಿದೆ.


ಕೋವಿಡ್-19 ಹಗರಣ ಸಂಬಂಧ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ ಕ್ರಿಮಿನಲ್‌ ವಿಚಾರಣೆ ನಡೆಸುವಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

2020 ಏಪ್ರಿಲ್‌ ತಿಂಗಳಲ್ಲಿ ಚೀನಾದ ಎರಡು ಕಂಪೆನಿಗಳಿಂದ ಮೂರು ಲಕ್ಷ ಪಿಪಿಇ ಕಿಟ್‌ಗಳನ್ನು ಯಾವುದೇ ಆಧಾರವಿಲ್ಲದೇ ದುಬಾರಿ ದರ ನೀಡಿ ಖರೀದಿಸಲಾಗಿದೆ. ಈ ಇಬ್ಬರನ್ನು ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಸೆಕ್ಷನ್ 7 ಮತ್ತು 11 ರಡಿ ಕ್ರಿಮಿನಲ್‌ ವಿಚಾರಣೆಗೆ ಒಳಪಡಿಸಬೇಕು. ಜೊತೆಗೆ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಳೆದ ಆಗಸ್ಟ್‌ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ. ಸದ್ಯ ಆಯೋಗ ಮಾಡಿರುವ ಶಿಫಾರಸುಗಳನ್ನು ರಾಜ್ಯ ಸಚಿವ ಸಂಪುಟದ ಉಪಸಮಿತಿ ಪರಿಶೀಲಿಸುತ್ತಿದೆ ಎಂದು ʼದ ಹಿಂದೂʼ ವರದಿ ಮಾಡಿದೆ.

ಕೋವಿಡ್-19 ಅವಧಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ನಿರ್ವಹಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತ ತನಿಖೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿತ್ತು.

ಚೀನಾದ ಡಿಎಚ್‌ಬಿ ಗ್ಲೋಬಲ್ ಹಾಂಕಾಂಗ್ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್‌ನಿಂದ 1999 ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ (ಕೆಟಿಪಿಪಿ) ಅನುಸಾರ ಯಾವುದೇ ಟೆಂಡರ್ ಕರೆಯದೇ ಕೇವಲ ಆದೇಶದ ಮೂಲಕ 3 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿತ್ತು. ಪ್ರತಿ ಕಿಟ್‌ಗೆ ₹ 2,000 ಕ್ಕಿಂತ ಹೆಚ್ಚು ದರ ನೀಡಿ ಖರೀದಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಕಾಯ್ದೆಯಡಿ ಮೂಲ ಖರೀದಿ ನಿಯಮ ಮತ್ತು ಕಾರ್ಯವಿಧಾನ ಅನುಸರಿಸದೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ನಿರ್ದೇಶನದ ಮೇರೆಗೆ ಪಿಪಿಇ ಕಿಟ್‌ ಖರೀದಿಸಲಾಗಿದೆ. ಸಾಮಗ್ರಿ ಖರೀದಿಯಲ್ಲಿನ ಅಕ್ರಮದ ಲಾಭ ಪಡೆಯುವ ಉದ್ದೇಶದಿಂದ ತಮಗೆ ಬೇಕಾದ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂದು ವರದಿ ಆರೋಪಿಸಿದೆ.

ಇದೇ ಅವಧಿಯಲ್ಲಿ ರಾಜ್ಯ ಸರ್ಕಾರ ಬೇರೆ ಕಂಪೆನಿಗಳಿಂದ ಒಟ್ಟು 18.07 ಲಕ್ಷ ಪಿಪಿಇ ಕಿಟ್‌ಗಳನ್ನು ಕೇವಲ ₹400 ರಿಂದ 1,444 ರೂ. ಪಾವತಿಸಿ ಖರೀದಿ ಮಾಡಿತ್ತು. ಆದರೆ, ಚೀನಾ ಸಂಸ್ಥೆಗಳಿಂದ ಖರೀದಿಸಿದ ಪಿಪಿಇ ಕಿಟ್‌ಗಳಿಗೆ ದುಬಾರಿ ದರ ತೋರಿಸಲಾಗಿದೆ. ಆದಾಗ್ಯೂ ಚೀನಾದಿಂದ ಪಿಪಿಇ ಕಿಟ್‌ಗಳನ್ನು ಖರೀದಿಸಲು ಯಾವುದೇ ಬಲವಾದ ಕಾರಣ ನೀಡಿಲ್ಲ ಎಂದು ವರದಿ ಹೇಳಿದೆ.

ಹಗರಣದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಉದ್ದೇಶಪೂರ್ವಕವಾಗಿ ಪೂರೈಕೆದಾರರೊಂದಿಗೆ ಶಾಮೀಲಾಗಿ ಕಾನೂನುಬಾಹಿರ ವಿಧಾನಗಳ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಆ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಇಬ್ಬರ ವಿರುದ್ಧ ಕ್ರಿಮಿನಲ್‌ ವಿಚಾರಣೆ ನಡೆಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

Read More
Next Story