
ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್
ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಮ್ಯೂಸಿಕ್ ವಿಡಿಯೋ ಕಾರಣವಾಯ್ತಾ?
ದೀಪಕ್ ತಪ್ಪೊಪ್ಪಿಗೆಯ ಪ್ರಕಾರ, ಗುರುವಾರ ಬೆಳಿಗ್ಗೆ 10.30 ರ ಸುಮಾರಿಗೆ ರಾಧಿಕಾ ಅಡುಗೆಮನೆಯಲ್ಲಿ ಉಪಹಾರ ತಯಾರಿಸುತ್ತಿದ್ದಾಗ ಆಕೆಯ ಬೆನ್ನಿಗೆ ಮೂರು ಗುಂಡುಗಳನ್ನು ಹಾರಿಸಿದ್ದಾನೆ.
ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವರನ್ನು ಗುರುವಾರ (ಜುಲೈ 10) ತಂದೆಯೇ ಗುಂಡಿಕ್ಕಿ ಹತ್ಯೆಗೈದಿರುವ ಪ್ರಕರಣದಲ್ಲಿ ಹೊಸ ಅಂಶಗಳು ಬೆಳಕಿಗೆ ಬಂದಿವೆ. ಆಕೆಯ ಆರ್ಥಿಕ ಸ್ವಾತಂತ್ರ್ಯ, ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ತಂದೆಗೆ ಇಷ್ಟವಿಲ್ಲದಿದ್ದ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿರುವುದು ಕೊಲೆಗೆ ಕಾರಣ ಎನ್ನಲಾಗುತ್ತಿದೆ.
ಪೊಲೀಸರ ಪ್ರಕಾರ, 49 ವರ್ಷದ ದೀಪಕ್ ಯಾದವ್ ಆರಂಭಿಕ ವಿಚಾರಣೆಯಲ್ಲಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ತನ್ನ ಮಗಳ ಗಳಿಕೆಯಿಂದ ತಾನು ಬದುಕುತ್ತಿದ್ದೇನೆ ಎಂದು ತನ್ನ ಊರಾದ ವಜೀರಾಬಾದ್‌ನ ಗ್ರಾಮಸ್ಥರು ಪದೇ ಪದೇ ಅಣಕಿಸುತ್ತಿದ್ದರು. ಅದಕ್ಕೆ ಕೋಪಗೊಂಡು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಆಕೆ ನಡೆಸುತ್ತಿದ್ದ ಟೆನಿಸ್ ಅಕಾಡೆಮಿಯನ್ನು ಮುಚ್ಚುವಂತೆ ಹಲವು ಬಾರಿ ಒತ್ತಾಯಿಸಿದ್ದೆ ಎಂದು ಹೇಳಿದ್ದಾನೆ.
ದೀಪಕ್ ತಪ್ಪೊಪ್ಪಿಗೆಯ ಪ್ರಕಾರ, ಗುರುವಾರ ಬೆಳಗ್ಗೆ 10.30 ರ ಸುಮಾರಿಗೆ ರಾಧಿಕಾ ಅಡುಗೆಮನೆಯಲ್ಲಿ ಉಪಹಾರ ತಯಾರಿಸುತ್ತಿದ್ದಾಗ ಆಕೆಯ ಬೆನ್ನಿಗೆ ಮೂರು ಗುಂಡುಗಳನ್ನು ಹಾರಿಸಿದ್ದಾನೆ. ಇದೇ ಕಟ್ಟಡದ ಕೆಳ ಮಹಡಿಯಲ್ಲಿ ವಾಸವಾಗಿದ್ದ ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಗುಂಡಿನ ಶಬ್ದ ಕೇಳಿ ಮೇಲೆ ಬಂದಾಗ, ರಾಧಿಕಾ ಅಡುಗೆ ಮನೆಯ ನೆಲದ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದರು. ರಿವಾಲ್ವರ್ ಪಕ್ಕದ ಡ್ರಾಯಿಂಗ್ ರೂಮಿನಲ್ಲಿ ಇತ್ತು. ತಕ್ಷಣ ಆಕೆಯನ್ನು ಸೆಕ್ಟರ್ 56 ರ ಏಷ್ಯಾ ಮಾರಿಂಗೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಸಂಗೀತ ವಿಡಿಯೋ ವಿವಾದವೇ ಪ್ರಮುಖ ಕಾರಣ?
ಮಾಜಿ ಬ್ಯಾಂಕ್ ಉದ್ಯೋಗಿಯಾಗಿರುವ ದೀಪಕ್, ತನ್ನ ಮಗಳು ತನ್ನದೇ ಆದ ಟೆನಿಸ್ ಅಕಾಡೆಮಿಯನ್ನು (ಸೆಕ್ಟರ್ 57 ರಲ್ಲಿ) ತೆರೆದ ನಂತರ ಆಕೆಯ ಹೆಚ್ಚುತ್ತಿರುವ ಸ್ಥಾನಮಾನ ಮತ್ತು ಸ್ವಾತಂತ್ರ್ಯದ ಬಗ್ಗೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ.
ಆರ್ಥಿಕ ಸ್ವಾತಂತ್ರ್ಯ ಮತ್ತು ಅಕಾಡೆಮಿ ನಡೆಸುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ನಿರಂತರ ಸಂಘರ್ಷದ ಅಂಶಗಳಾಗಿದ್ದರೂ, ರಾಧಿಕಾ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು ಮನೆಯಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಶ್ನಾರ್ಹ ವೀಡಿಯೊವು 'ಕಾರ್ವಾನ್' ಎಂಬ ಶೀರ್ಷಿಕೆಯ ಹಾಡಾಗಿದ್ದು, ಇದನ್ನು ಸ್ವತಂತ್ರ ಕಲಾವಿದ INAAM ನಿರ್ಮಿಸಿದ್ದು, Zeeshan Ahmad ನಿರ್ಮಿಸಿ, LLF ರೆಕಾರ್ಡ್ಸ್ ಲೇಬಲ್ ಅಡಿಯಲ್ಲಿ ಒಂದು ವರ್ಷದ ಹಿಂದೆ ಬಿಡುಗಡೆ ಮಾಡಿದ್ದರು. ಈ ವೀಡಿಯೊದಲ್ಲಿ ರಾಧಿಕಾ INAAM ಜೊತೆಗೆ ಹಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಅಪ್ಪಆಕ್ಷೇಪ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಅಳಿಸುವಂತೆ ಕೇಳಿಕೊಂಡಿದ್ದನು.
ಕುಟುಂಬದಲ್ಲಿ ಬಿರುಕು ಮತ್ತು ತಂದೆಯ ತಪ್ಪೊಪ್ಪಿಗೆ
ಇತ್ತೀಚಿನ ಪಂದ್ಯವೊಂದರಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದ ರಾಧಿಕಾ ತಮ್ಮ ಕ್ರೀಡಾ ವೃತ್ತಿಜೀವನಕ್ಕೆ ವಿರಾಮ ನೀಡಿದ್ದರು. ಆದರೆ ಟೆನಿಸ್‌ನಿಂದ ಸಂಪೂರ್ಣವಾಗಿ ದೂರ ಸರಿಯುವ ಬದಲು, ಅವರು ಯುವ ಆಟಗಾರರಿಗೆ ತರಬೇತಿ ನೀಡಲು ನಿರ್ಧರಿಸಿದ್ದರು.
ಮಗಳ ಆದಾಯದ ಮೇಲೆ ತಾನು ಅವಲಂಬಿತನಾಗಿದ್ದೇನೆ ಎಂಬ ಗ್ರಾಮಸ್ಥರ ಟೀಕೆಗಳ ನಂತರ ದೀಪಕ್ ಹೆಚ್ಚು ಆಕ್ರಮಣಕಾರಿಯಾಗಿದ್ದ ಎಂದು ಪೊಲೀಸರು ಹೇಳುತ್ತಾರೆ. ಎಫ್‌ಐಆರ್‌ನಲ್ಲಿ ದಾಖಲಾದ ಅವರ ಹೇಳಿಕೆಯಲ್ಲಿ ಮಗಳ ಯಶಸ್ಸಿನಿಂದ ತಾನು ಬದುಕುತ್ತಿದ್ದೇನೆ ಎಂಬ ಕಾಮೆಂಟ್‌ಗಳಿಂದ ತೀವ್ರವಾಗಿ ನೊಂದಿರುವುದಾಗಿ ತಿಳಿಸಿದ್ದಾರೆ.
"ನಾನು ವಜೀರಾಬಾದ್ ಗ್ರಾಮಕ್ಕೆ ಹಾಲು ತರಲು ಹೋದಾಗ, ಜನರು ನನ್ನ ಮಗಳ ಗಳಿಕೆಯಿಂದ ನಾನು ಬದುಕುತ್ತಿದ್ದೇನೆ ಎಂದು ಅಣಕಿಸುತ್ತಿದ್ದರು. ಇದು ನನಗೆ ಬೇಸರ ಉಂಟು ಮಾಡಿತು. ಕೆಲವರು ನನ್ನ ಮಗಳ ಚಾರಿತ್ರ್ಯವನ್ನೂ ಪ್ರಶ್ನಿಸಿದ್ದರು. ನಾನು ನನ್ನ ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಹೇಳಿದೆ, ಆದರೆ ಅವಳು ನಿರಾಕರಿಸಿದಳು" ಎಂದು ದೀಪಕ್ ಪೊಲೀಸರಿಗೆ ಹೇಳಿದ್ದಾನೆ.
ಕುಟುಂಬದ ಹೇಳಿಕೆಗಳೇನು?
ಆರೋಪಿಯ ಕಿರಿಯ ಸಹೋದರ ಮತ್ತು ರಾಧಿಕಾ ಅವರ ಚಿಕ್ಕಪ್ಪ ಕುಲದೀಪ್ ಯಾದವ್ ಎಫ್‌ಐಆರ್ ದಾಖಲಿಸಿದ್ದಾರೆ. "ಸುಮಾರು 10.30 ಕ್ಕೆ, ನನಗೆ ದೊಡ್ಡ ಶಬ್ದ ಕೇಳಿಸಿತು. ನಾನು ಮೇಲೆ ಹೋದಾಗ, ನನ್ನ ಸೊಸೆ ಅಡುಗೆಮನೆಯಲ್ಲಿ ನಿಶ್ಚಲವಾಗಿ ಬಿದ್ದಿದ್ದಳು. ರಿವಾಲ್ವರ್ ಡ್ರಾಯಿಂಗ್ ರೂಮಿನ ನೆಲದ ಮೇಲಿತ್ತು. ನನ್ನ ಮಗ ಮತ್ತು ನಾನು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಆದರೆ ಅವಳು ಅಷ್ಟರಾಗಲೇ ಪ್ರಾಣಬಿಟ್ಟಿದ್ದಳು" ಎಂದು ಕುಲದೀಪ್ ಪೊಲೀಸರಿಗೆ ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆದಾಗ ಆರೋಪಿಯ ಪತ್ನಿ ಮಂಜು ಯಾದವ್ ಮನೆಯಲ್ಲಿಯೇ ಇದ್ದರು, ಆದರೆ ಲಿಖಿತ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಪೊಲೀಸರ ಪ್ರಕಾರ, ಅವರಿಗೆ ಜ್ವರ ಇದ್ದ ಕಾರಣ ತಮ್ಮ ಕೋಣೆಯಲ್ಲಿ ಬೀಗ ಹಾಕಿಕೊಂಡು ಕುಳಿತಿದ್ದರು ಎಂದು ಹೇಳಿದ್ದಾರೆ.
"ಅವಳು ಪ್ರಮುಖ ಟೆನಿಸ್ ಆಟಗಾರ್ತಿಯಾಗಿದ್ದು, ಅನೇಕ ಟ್ರೋಫಿಗಳನ್ನು ಗೆದ್ದಿದ್ದಳು. ಆಕೆಯ ಸಾವಿನಿಂದ ನನಗೆ ಆಘಾತವಾಗಿದೆ ಮತ್ತು ಆಕೆಯನ್ನು ಏಕೆ ಕೊಲ್ಲಲಾಯಿತು ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ಮೊದಲ ಮಹಡಿಗೆ ಹೋದಾಗ, ನನ್ನ ಸಹೋದರ ದೀಪಕ್, ನನ್ನ ಅತ್ತಿಗೆ ಮಂಜು ಯಾದವ್, ಮತ್ತು ರಾಧಿಕಾ ಮಾತ್ರ ಇದ್ದರು" ಎಂದು ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.