
ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ | ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಬಂಧನ
ಫೆ.14 ರಂದು ಉದ್ಯಮಿ ಬಸವರಾಜ ಅಂಬಿ ಅವರ ಅಪಹರಣ ನಡೆದಿತ್ತು. ಬಳಿಕ ಅವರ ಪತ್ನಿ ಶೋಭಾ ಅವರಿಗೆ ಕರೆ ಮಾಡಿದ್ದ ಅಪಹರಣಕಾರರು ಐದು ಕೋಟಿಗೆ ಬೇಡಿಕೆ ಇಟ್ಟಿದ್ದರು.
ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಘಟಪ್ರಭಾ ಪೊಲೀಸರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ, ರಾಮಗನಟ್ಟಿ-ಗೋಕಾಕ್ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರಾಮಗನಟ್ಟಿ ಅವರನ್ನು ಬಂಧಿಸಿದ್ದಾರೆ. ಮಂಜುಳಾ ಬಂಧನದಿಂದ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ.
ಫೆ.14 ರಂದು ಉದ್ಯಮಿ ಬಸವರಾಜ ಅಂಬಿ ಅವರ ಅಪಹರಣ ನಡೆದಿತ್ತು. ಬಳಿಕ ಅವರ ಪತ್ನಿ ಶೋಭಾ ಅವರಿಗೆ ಕರೆ ಮಾಡಿದ್ದ ಅಪಹರಣಕಾರರು ಐದು ಕೋಟಿಗೆ ಬೇಡಿಕೆ ಇಟ್ಟಿದ್ದರು.
ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಘಟಪ್ರಭಾ ಠಾಣೆ ಪೊಲೀಸರು 24ಗಂಟೆಗಳಲ್ಲೇ ಪ್ರಕರಣ ಭೇದಿಸಿ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ರಕ್ಷಿಸಿದ್ದರು. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದರು.
ಘಟನೆ ಹಿನ್ನೆಲೆ ಏನು?
ಫೆ.14 ರಂದು ಮೀರಜ್‌ನಿಂದ ಮನೆಗೆ ವಾಪಸಾಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಬಸವರಾಜ ಅಂಬಿಯನ್ನು ದುಷ್ಕರ್ಮಿಗಳು ಮಾರ್ಗಮಧ್ಯೆ ಅಪಹರಿಸಿದ್ದರು. ಫೆ.15 ರಂದು ಅವರ ಪತ್ನಿಗೆ ಕರೆ ಮಾಡಿ, ಐದು ಕೋಟಿ ರೂ. ಹಣ ತಂದುಕೊಟ್ಟು ನಿಮ್ಮ ಪತಿಯನ್ನು ಬಿಡಿಸಿಕೊಂಡು ಹೋಗಿ ಎಂದು ಅಪಹರಣಕಾರರು ಹೇಳಿದ್ದರು. ಇದರಿಂದ ಗಾಬರಿಗೊಂಡ ಬಸವರಾಜ ಅಂಬಿ ಅವರ ಪತ್ನಿ ಶೋಭಾ ಈ ವಿಷಯವನ್ನು ಮಗನಿಗೆ ತಿಳಿಸಿ, 10 ಲಕ್ಷ ಹಣದೊಂದಿಗೆ ಅಪಹರಣಕಾರರು ಹೇಳಿದ್ದ ನಿಪ್ಪಾಣಿಯ ಡಾಬಾ ವಿಳಾಸಕ್ಕೆ ತೆರಳಿದ್ದರು.
ಶೋಭಾ ಸೇರಿದಂತೆ 4-5 ಜನರು ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿಗಳು ಆ ದಿನ ಭೇಟಿಯಾಗಿರಲಿಲ್ಲ. ಶೋಭಾ ಅವರಿಗೆ ಮತ್ತೊಮ್ಮೆ ಕರೆ ಮಾಡಿ ನೀವು ಒಬ್ಬರೇ ಐದು ಕೋಟಿ ಹಣ ತರುವಂತೆ ಸೂಚಿಸಿದ್ದರು. ಇದು ಸಾಧ್ಯವಾಗದ ಕಾರಣ ಫೆ.18 ರಂದು ಶೋಭಾ ಅವರು ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ “ನನ್ನ ಪತಿಯನ್ನು ಯಾರೋ ಅಪಹರಣ ಮಾಡಿದ್ದಾರೆ. ಹುಡುಕಿ ಕೊಡಿ” ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು, ಮೊಬೈಲ್ ಲೊಕೇಷನ್ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಉದ್ಯಮಿ ಬಸವರಾಜ ಅವರನ್ನು ರಕ್ಷಣೆ ಮಾಡಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಪ್ರಮುಖ ಆರೋಪಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಮಂಜುಳಾ ಎಂಬ ವಿಚಾರ ಬಹಿರಂಗವಾಗಿದೆ. ಮಂಜುಳಾ ರಾಮಗನಟ್ಟಿ ಅವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಆಕೆಯ ಪುತ್ರ ಈಶ್ವರ್ ಎಂಬುವರೇ ಬಾಯಿ ಬಿಟ್ಟಿದ್ದಾರೆ. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸಲು ಸಂಚು
ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಬಸವರಾಜ ಅಂಬಿ ಅವರು ಕೆಲ ವರ್ಷಗಳಿಂದ ಬಾಗಲಕೋಟೆಯ ಮಹಾಲಿಂಗಪುರ, ತೇರದಾಳ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇದರಿಂದ ಕೋಟ್ಯಂತರ ರೂ. ಹಣ ಮಾಡುತ್ತಿದ್ದರು. ಬಸವರಾಜು ಅಂಬಿ ಅವರನ್ನು ಅಪಹರಿಸಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಸಂಚು ರೂಪಿಸಿ, ಎರಡು ಕಾರುಗಳಲ್ಲಿ ಬಂದು ಮೂಡಲಗಿ ತಾಲೂಕಿನ ದಂಡಾಪುರ ಗ್ರಾಮದ ಕ್ರಾಸ್ ಬಳಿ ಅಪಹರಣ ಮಾಡಿದ್ದರು.
ಪ್ರಕರಣದ ಪ್ರಮುಖ ಆರೋಪಿ ಈಶ್ವರ ರಾಮಗನಟ್ಟಿ, ಸಚಿನ್ ಕಾಂಬ್ಳೆ, ರಮೇಶ್ ಕಾಂಬ್ಳೆ, ರಾಘವೇಂದ್ರ ಮಾರಾಪುರ ಅವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದ ಮಂಜುಳಾ ಅವರು ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವುದು ಸಚಿವರು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ತಂದೊಡ್ಡಿದೆ.