ಪಕ್ಷ ಸೂಚಿಸಿದರೆ ಚನ್ನಪಟ್ಟಣ ಉಪಚುನಾವಣೆಗೆ ಕಣಕ್ಕಿಳಿಯಲು ಸಿದ್ಧ: ಡಿ ಕೆ ಶಿವಕುಮಾರ್
x

ಪಕ್ಷ ಸೂಚಿಸಿದರೆ ಚನ್ನಪಟ್ಟಣ ಉಪಚುನಾವಣೆಗೆ ಕಣಕ್ಕಿಳಿಯಲು ಸಿದ್ಧ: ಡಿ ಕೆ ಶಿವಕುಮಾರ್


ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಯಾರು ಸ್ಪರ್ಧೆ ಮಾಡಬಹುದು ಎನ್ನುವ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭಗೊಂಡಿವೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್‌ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿರುವ ಈ ಹೊತ್ತಲ್ಲಿ, ಪಕ್ಷ ಸೂಚಿಸಿದರೆ ಉಪ ಚುನಾವಣಾ ಕಣಕ್ಕಿಳಿಯಲು ತಾವು ಸಿದ್ದ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʻʻಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರಿಗೆ ಜನ ವಿಶ್ರಾಂತಿ ಕೊಟ್ಟು, ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸದ್ಯ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಆದರೆ, ಪಕ್ಷದ ಚುನಾವಣಾ ಸಮಿತಿ ನನ್ನ ಅಥವಾ ಸುರೇಶ್ ಹೆಸರನ್ನು ಸೂಚಿಸಿದರೆ ಕೇಳಲೇಬೇಕುʼʼ ಎಂದರು.

"ಈ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಜೊತೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತೇವೆ. ಬಳಿಕ ಯಾರು ಸ್ಪರ್ಧಿಸಬೇಕೆಂದು ಪಕ್ಷದ ಚುನಾವಣಾ ಸಮಿತಿಯಲ್ಲಿ ತೀರ್ಮಾನಿಸುತ್ತೇವೆʼʼ ಎಂದು ಹೇಳಿದರು.

ʻʻಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹಿಂದಿನ ಜನಪ್ರತಿನಿಧಿ ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಲಿಲ್ಲ. ಹಾಗಾಗಿ ನಾನು ಆ ಕೆಲಸ ಮಾಡುತ್ತಿದ್ದೇನೆʼʼ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸದೆ ಡಿಕೆ ಶಿವಕುಮಾರ್ ಕುಟುಕಿದ್ದಾರೆ.

Read More
Next Story