ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತ; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ, ಆಕ್ರೋಶ ಸಾಧ್ಯತೆ
x

ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತ; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ, ಆಕ್ರೋಶ ಸಾಧ್ಯತೆ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದಲ್ಲಿ ಸುಮಾರು 2-3 ಲಕ್ಷ ಜನರು ಸೇರಿದ್ದರು. ಈ ಅನಿರೀಕ್ಷಿತ ಜನಸಂದಣಿ ನಿಯಂತ್ರಿಸಲು ಭದ್ರತಾ ವ್ಯವಸ್ಥೆ ವಿಫಲವಾಗಿತ್ತು.


ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ವಿಚಾರವು ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಘಟನೆಯು ಕೇವಲ ರಾಜ್ಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿರುವುದರಿಂದ ಸರ್ಕಾರದ ವಿರುದ್ಧ ಆಕ್ಷೇಪಗಳು ವ್ಯಕ್ತಗೊಂಡಿವೆ. ಹೀಗಾಗಿ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲು ಹಲವಾರು ಸಚಿವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದಲ್ಲಿ ಸುಮಾರು 2-3 ಲಕ್ಷ ಜನರು ಸೇರಿದ್ದರು. ಈ ಅನಿರೀಕ್ಷಿತ ಜನಸಂದಣಿ ನಿಯಂತ್ರಿಸಲು ಭದ್ರತಾ ವ್ಯವಸ್ಥೆ ವಿಫಲವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಪ್ರಕಾರ, ಗೇಟ್ 7ರ ಬಳಿ "ಉಚಿತ ಟಿಕೆಟ್" ಎಂಬ ವದಂತಿ ಹರಡಿದ್ದರಿಂದ ಜನರು ಒಳನುಗ್ಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಉಂಟಾದ ಗೊಂದಲ ಮತ್ತು ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ ಈ ಎಲ್ಲ ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ಈ ದುರಂತಕ್ಕೆ ಯಾರು ಜವಾಬ್ದಾರರು ಎಂಬುದು ಸಭೆಯಲ್ಲಿ ಚರ್ಚೆಯಾಗಲಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಆಯೋಜನೆಯ ಹೊಣೆಗಾರಿಕೆಯನ್ನು ಹೊಂದಿದ್ದರೂ, ಭದ್ರತಾ ನಿರ್ವಹಣೆ ರಾಜ್ಯ ಪೊಲೀಸ್ ಇಲಾಖೆಯದ್ದಾಗಿತ್ತು. ಕೇವಲ 2,000 ಪೊಲೀಸ್ ಸಿಬ್ಬಂದಿಯನ್ನು 2-3 ಲಕ್ಷ ಜನರನ್ನು ನಿಯಂತ್ರಿಸಲು ನಿಯೋಜಿಸಿದ್ದು ಭದ್ರತಾ ವೈಫಲ್ಯಕ್ಕೆ ಕಾರಣವಾಯಿತೇ ಎಂಬ ಆರೋಪಗಳ ಕುರಿತು ಪ್ರಶ್ನೆಗಳು ಸಭೆಯಲ್ಲಿ ಏಳಲಿವೆ.

ಸಂಭ್ರಮಾಚರಣೆಯನ್ನು ತರಾತುರಿಯಲ್ಲಿ ಆಯೋಜಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೊಡ್ಡ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದ್ದರೂ ಸೂಕ್ತ ಯೋಜನೆ ರೂಪಿಸದಿರುವುದು ಏಕೆ ಎಂಬ ಪ್ರಶ್ನೆಗಳು ಸಚಿವರ ವಲಯದಲ್ಲೇ ಎದ್ದಿವೆ. ವಿಜಯ ಪಥಯಾತ್ರೆಯ ಕುರಿತು ಆರ್‌ಸಿಬಿಯ ಸಾಮಾಜಿಕ ಮಾಧ್ಯಮ ಘೋಷಣೆ ಮತ್ತು ಗೃಹ ಸಚಿವರ ಪ್ರಕಟಣೆಗಳ ನಡುವಿನ ಗೊಂದಲವೂ ಚರ್ಚೆಯಾಗಲಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಘಟನೆಯ ಸಮಗ್ರ ತನಿಖೆ, ಭದ್ರತಾ ಕ್ರಮಗಳ ಸುಧಾರಣೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಮತ್ತಷ್ಟು ಬೆಂಬಲ ಹಾಗೂ ಕೆಸಿಎಯ ಪಾತ್ರದ ಕುರಿತು ಮಹತ್ವದ ತೀರ್ಮಾನಗಳನ್ನು ನಿರೀಕ್ಷಿಸಲಾಗಿದೆ.

Read More
Next Story