
ರಸ್ತೆಗೆ ಬಿದ್ದಿರುವ ಯುವತಿ
ರ‍್ಯಾಪಿಡೋ ಬೈಕ್ ಚಾಲಕ ಯುವತಿಗೆ ಕಪಾಳಮೋಕ್ಷ ; ವಿಡಿಯೋ ವೈರಲ್, ಕೇಸ್ ದಾಖಲು
ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಎಂಬಾತ ಶ್ರೇಯಾ ಎಂಬುವರಿಗೆ ಹಲ್ಲೆ ನಡೆಸಿದ್ದಾರೆ. ಜೂನ್ 14ರಂದು ಈ ಘಟನೆ ನಡೆದಿದೆ. ಆದರೆ ಸೋಮವಾರ ಈ ಪ್ರಕರಣ ಬೆಳಕಿಗೆ ಬಂದಿದೆ.
ರಾಪಿಡೋ ಬೈಕ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಅವರ ವಿಡಿಯೊ ಸೋಮವಾರ (ಜೂನ್ 16) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ದೂರು ದಾಖಲಾಗಿದೆ.
ಟ್ಯಾಕ್ಸಿ ಚಾಲಕ ಸುಹಾಸ್ ಎನ್ನುವಾತ ಶ್ರೇಯಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಜೂನ್ 14ರಂದು ನಡೆದಿದ್ದರೂ ಜೂನ್ 16 ಈ ಪ್ರಕರಣ ಬಹಿರಂಗವಾಗಿದೆ.
ಶ್ರೇಯಾ ಅವರು ಸುಹಾಸ್ ಓಡಿಸುತ್ತಿದ್ದ ರ‍್ಯಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಗವಾಗಿ ಓಡಿಸಬೇಡಿ ಎಂದು ಆಕೆ ಮನವಿ ಮಾಡಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಸುಹಾಸ್ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಏಟಿನ ರಭಸಕ್ಕೆ ಶ್ರೇಯಾ ರಸ್ತೆಗೆ ಬಿದ್ದಿದ್ದಾರೆ. ಅದನ್ನು ಯಾರೊ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಹಾಸ್ ಪ್ರತಿಕ್ರಿಯೆ ನೀಡಿದ್ದು, ಆಕೆ ಹಣ ನೀಡಲು ಮತ್ತು ಹೆಲ್ಮೆಟ್ ಹಿಂತಿರುಗಿಸಲು ನಿರಾಕರಿಸಿದ್ದಳು. ಕೊಡುವಂತೆ ಕೋರಿದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಟಿಫಿನ್ ಬಾಕ್ಸ್ ನಿಂದ ಹೊಡೆದಳು. ಜನರ ಮುಂದೆ ಅವಮಾನ ಆದ ಸಿಟ್ಟಲ್ಲಿ ನಾನು ಹೊಡೆದೆ ಎಂದು ಹೇಳಿಕೆ ನೀಡಿದ್ದಾನೆ.
ಜಯನಗರದ ಪಾದರಕ್ಷೆಗಳ ಶೋರೂಂ ಒಂದರ ಬಳಿ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಯುವತಿ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆ ಆರಂಭದಲ್ಲಿ ದೂರು ನೀಡಲು ನಿರಾಕರಿಸಿದ್ದಳು. ಜಯನಗರ ಪೊಲೀಸರು ಸುಹಾಸ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.