Rapido advertisement fraud: Central Consumer Protection Authority imposes Rs 10 lakh fine
x

ಸಾಂದರ್ಭಿಕ ಚಿತ್ರ

ರಾಪಿಡೋ ವಿರುದ್ಧ 1,799 ದೂರು: ಜಾಹೀರಾತು ವಂಚನೆ ಆರೋಪ ಸಂಬಂಧ 10 ಲಕ್ಷ ರೂ. ದಂಡ

ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು.


ʼಐದೇ ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿʼ ಹೀಗೆ ಜಾಹೀರಾತು ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ʼರಾಪಿಡೋʼ ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ಬರೋಬ್ಬರಿ 10 ಲಕ್ಷ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂತಹ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.

ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ತಕ್ಷಣದಿಂದಲೇ ಇಂತಹ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶ ನೀಡಿದೆ.

ಮೋಸದ ಜಾಹೀರಾತು ನಿಲ್ಲಿಸಲು ನಿರ್ದೇಶನ

ʼ5 ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿʼ ಹಾಗೂ ʼಗ್ಯಾರಂಟಿ ಆಟೋʼ ಎಂದೆಲ್ಲಾ ಭರವಸೆ ನೀಡುತ್ತಿದ್ದ ರಾಪಿಡೋ ಜಾಹೀರಾತು ಮತ್ತು ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಪಿಎ ಇದೊಂದು ಮೋಸದ ಜಾಹೀರಾತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಜನರ ದಾರಿ ತಪ್ಪಿಸುವುದಾಗಿದ್ದು, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ. ಹಾಗಾಗಿ ತಕ್ಷಣವೇ ಇದನ್ನು ನಿಲ್ಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.

ಗ್ರಾಹಕರಿಂದ 1,799 ದೂರುಗಳು

ರಾಪಿಡೋ ಸಂಸ್ಥೆಯ ಮೋಸದ ಜಾಹೀರಾತು ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೂಲಕ ಅತ್ಯಧಿಕ ದೂರುಗಳು ದಾಖಲಾಗಿವೆ. 2023ರ ಏಪ್ರಿಲ್‌ನಿಂದ 2024ರ ಮೇ ವರೆಗೆ 575 ದೂರುಗಳು ಬಂದಿವೆ. 2024 ಜೂನ್‌ ನಿಂದ 2025ರ ಜುಲೈ ವರೆಗೆ 1,224 ದೂರುಗಳು ಬಂದಿವೆ.

ಸಿಸಿಪಿಎ ತನಿಖೆ ವೇಳೆ ರಾಪಿಡೋ ಜಾಹೀರಾತುಗಳಲ್ಲಿ ʼT&C (Terms and Conditions)ʼ ಅನ್ವಯ ಎಂಬುದು ಓದಲಾಗದಂಥ ಅತ್ಯಂತ ಚಿಕ್ಕ ಗಾತ್ರದ ಅಕ್ಷರದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಅಲ್ಲದೇ, ಭರವಸೆ ನೀಡಿದಂತೆ 50 ರೂ. ಮೊತ್ತವೂ ಸಿಗುತ್ತಿರಲಿಲ್ಲ. ಬದಲಿಗೆ ʼರಾಪಿಡೋ ನಾಣ್ಯಗಳುʼ ರೂಪದಲ್ಲಿ ಅದೂ ಕೇವಲ 7 ದಿನಗಳ ಮಾನ್ಯತೆ ಹೊಂದಿತ್ತು. ಇದಲ್ಲದೆ, ಈ ಆಫರ್‌ ಅನ್ನು ʼವೈಯಕ್ತಿಕವಾಗಿ ಕೆಲವರು ನೀಡುತ್ತಿದ್ದಾರೆಯೇ ಹೊರತು ರಾಪಿಡೋʼ ಅಲ್ಲ ಎಂದು ಹೇಳಿ ಕಂಪನಿ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿತ್ತು.

ರಾಪಿಡೋ ವಿರುದ್ಧ ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಲೇ ಇದ್ದವು. ಸೇವಾ ನ್ಯೂನ್ಯತೆ, ಪಾವತಿಸಿದ ಮೊತ್ತ ಮರುಪಾವತಿ ಮಾಡದೇ ಇರುವುದು, ಅಧಿಕ ಶುಲ್ಕ ವಿಧಿಸುವುದು, ಭರವಸೆ ನೀಡಿದಂತೆ ಸೇವೆ ಒದಗಿಸುವಲ್ಲಿ ವಿಫಲ ಹಾಗೂ ಖಾತರಿಪಡಿಸಿದ ʼ5 ನಿಮಿಷʼ ಸೇವೆ ಪೂರೈಸದಿರುವ ಬಗ್ಗೆ ದೂರುಗಳು ವ್ಯಾಪಕವಾಗಿದ್ದವು. ಈ ಬಗ್ಗೆ ಸಂಸ್ಥೆಯ ಗಮನ ಸೆಳೆದರೂ ಪರಿಹರಿಸದೆ ಕಡೆಗಣಿಸಿತ್ತು.

ಜಾಹೀರಾತುಗಳ ಬಗ್ಗೆ ಜಾಗರೂಕರಾಗಿರಲು ಸಲಹೆ

ದೊಡ್ಡ ದೊಡ್ಡ ಭರವಸೆ ನೀಡುವ ಅಥವಾ ಷರತ್ತುಗಳನ್ನು ವಿವರಿಸದೆ ʼಖಾತರಿʼ ಅಥವಾ ʼಖಚಿತʼದಂತಹ ಜಾಹೀರಾತುಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಸಿಸಿಪಿಎ ಸಲಹೆ ನೀಡಿದೆ. ಅಲ್ಲದೇ, ಇಂತಹ ದಾರಿ ತಪ್ಪಿಸುವ ಜಾಹೀರಾತು, ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಸಮಸ್ಯೆ ಎದುರಿಸಿದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ʼ1915ʼ ಕರೆ ಮಾಡಿ ದೂರು ಸಲ್ಲಿಸಲು ಅಥವಾ ಎನ್‌ಸಿಎಚ್‌ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ದೂರು ಸಲ್ಲಿಸುವಂತೆ ತಿಳಿಸಿದೆ.


Read More
Next Story