Adolescent Pregnancy | ಅಪ್ರಾಪ್ತ ಸಂತ್ರಸ್ತೆಯಿಂದ ಗರ್ಭಪಾತ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ
x

Adolescent Pregnancy | ಅಪ್ರಾಪ್ತ ಸಂತ್ರಸ್ತೆಯಿಂದ ಗರ್ಭಪಾತ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಅತ್ಯಾಚಾರಕ್ಕೊಳಗಾಗಿ 27 ವಾರಗಳ ಗರ್ಭಿಣಿಯಾಗಿರುವ ಅಪ್ರಾಪ್ತ ಸಂತ್ರಸ್ತೆಯೊಬ್ಬರ ಗರ್ಭಪಾತಕ್ಕೆ ಅನುಮತಿ ಕೋರಿರುವ ಸಂಬಂಧ ರಾಜ್ಯ ಸರ್ಕಾರ ಹಾಗೂ ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್‌ ತುರ್ತು ನೋಟಿಸ್ ಜಾರಿಗೊಳಿಸಿದೆ.


ಅತ್ಯಾಚಾರಕ್ಕೊಳಗಾಗಿ 27 ವಾರಗಳ ಗರ್ಭಿಣಿಯಾಗಿರುವ ಅಪ್ರಾಪ್ತ ಸಂತ್ರಸ್ತೆಯೊಬ್ಬರ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್‌ ತುರ್ತು ನೋಟಿಸ್ ಜಾರಿಗೊಳಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಹದಿನಾರು ವರ್ಷದ ಬಾಲಕಿಯು ತನ್ನ ತಾಯಿಯ ಮುಖೇನ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು. ಈ ವೇಳೆ ಪ್ರತಿವಾದಿಗಳಾದ ಶಿವಾಜಿನಗರದ ಜಿಎಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆ, ಮಕ್ಕಳ ಕಲ್ಯಾಣ ಸಮಿತಿಗ ಮತ್ತು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಸಹ ಪೀಠ ನೋಟಿಸ್‌ ನೀಡಿದೆ.

ಸಂತ್ರಸ್ತೆಯು ಶುಕ್ರವಾರವೇ (ಜನವರಿ 24) ವಾಣಿ ವಿಲಾಸ ಆಸ್ಪತ್ರೆಗೆ ತೆರಳಿ ದಾಖಲಾಗಬಹುದು. ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸೋಮವಾರದೊಳಗೆ ಸಂತ್ರಸ್ತೆಯ ತಪಾಸಣೆಗೆ ವೈದ್ಯಕೀಯ ಮಂಡಳಿ ರಚಿಸಬೇಕು. ಅದರ ಮುಂದೆ ಸೋಮವಾರ ಸಂತ್ರಸ್ತೆ ಹಾಜರಾಗಬೇಕು. ಸಂತ್ರಸ್ತೆಗೆ ವೈದ್ಯಕೀಯ ಗರ್ಭಪಾತ ಮಾಡುವ ಸಾಧ್ಯತೆ ಬಗ್ಗೆ ಮಂಡಳಿ ತಪಾಸಣೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಪೀಠ ಅರ್ಜಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.

ಒಂದೊಮ್ಮೆ ಜನವರಿ 29ರೊಳಗೆ ಮಂಡಳಿ ವರದಿ ಸಲ್ಲಿಸಿದರೆ, ಸಂತ್ರಸ್ತೆ ಹಾಗೂ ಆಕೆಯ ತಾಯಿ ನ್ಯಾಯಾಲಯದ ಮುಂದೆ ಬಂದು ಮುಂದಿನ ಕ್ರಮಕ್ಕಾಗಿ ಕೋರಬಹುದು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಸಂತ್ರಸ್ತೆಯ ತಾಯಿ 2025ರ ಜನವರಿ 16ರಂದು ಪೊಲೀಸರಿಗೆ ದೂರು ನೀಡಿ, ನನ್ನ 16 ವರ್ಷದ ಮಗಳ ಮೇಲೆ ಯುವಕನೊಬ್ಬ ಕಳೆದ ಆರು-ಏಳು ತಿಂಗಳಿಂದ ನಿಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಪುತ್ರಿ ಗರ್ಭ ಧರಿಸಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯಿದೆ ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಜನವರಿ 18ರಂದು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಆಕೆ 26 ವಾರ, 6 ದಿನಗಳ ಗರ್ಭಿಣಿ ಆಗಿರುವುದು ತಿಳಿಯಿತು.

ಈ ಮಧ್ಯೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಕೋರಿದ್ದರು. ಸಮಿತಿಯು 2025 ಜನವರಿ 21ರಂದು ಈ ಕುರಿತು ವರದಿ ನೀಡಿತ್ತು. ನಂತರ ಸಂತ್ರಸ್ತೆಯನ್ನು ಸರ್ಕಾರಿ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ತನ್ನ ತಾಯಿ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸಂತ್ರಸ್ತೆಯು, ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು. ಗರ್ಭಪಾತ ಮಾಡಲು ವೈದ್ಯಕೀಯ ಮಂಡಳಿ ರಚನೆ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Read More
Next Story