Prajwal Revana | ಅತ್ಯಾಚಾರ ಪ್ರಕರಣ; ಆಕ್ಷೇಪ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ
x

Prajwal Revana | ಅತ್ಯಾಚಾರ ಪ್ರಕರಣ; ಆಕ್ಷೇಪ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂದ ಮಾತ್ರಕ್ಕೆ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಲು ಬರುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.


ಮನೆಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರು ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂದು ಜಾಮೀನು ಕೋರಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಹೇಳಿತು.

ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಎರಡನೇ ಬಾರಿ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರಜ್ವಲ್‌ ಪ್ರತಿನಿಧಿಸಿದ್ದ ವಕೀಲರು “ಆರೋಪಿತ ಅತ್ಯಾಚಾರವು 2021ರಲ್ಲಿ ನಡೆದಿದ್ದು, ನಾಲ್ಕೂವರೆ ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಇದಕ್ಕೆ ಯಾವುದೇ ವಿವರಣೆ ನೀಡಲಾಗಿಲ್ಲ. ಹೀಗಾಗಿ ಪ್ರಜ್ವಲ್ ಅವರನ್ನು ಜೈಲಿನಲ್ಲಿ ಇರುವಂತೆ ಮಾಡಲಾಗದು” ಎಂದು ವಾದಿಸಿದರು.

ರಾಜ್ಯ ಸರ್ಕಾರದ ವಕೀಲರು “ ಪ್ರಜ್ವಲ್‌ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ತಿರಸ್ಕೃತವಾಗಿತ್ತು. ಆನಂತರ ಯಾವುದೇ ಬದಲಾವಣೆಯಾಗಿಲ್ಲ. ಇತರೆ ಆರೋಪಿಗಳ ವಿರುದ್ಧದ ಪ್ರಕರಣ ತಡೆಯಾಜ್ಞೆಯಾಗಿದೆ. ಪ್ರಜ್ವಲ್‌ ವಿರುದ್ದ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ” ಎಂದು ವಿವರಣೆ ನೀಡಿದರು.

ಆಗ ಪೀಠವು “ಇತರೆ ಆರೋಪಿಗಳ ವಿರುದ್ಧ ತಡೆಯಾಜ್ಞೆ ಇದ್ದರೂ ನಿಮ್ಮ (ಪ್ರಜ್ವಲ್‌) ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ. ವಿಶೇಷವಾದ ಕಾರಣ ತೋರದ ಹೊರತು ಜಾಮೀನು ನೀಡಲಾಗುತ್ತದೆಯೇ? ನಿಮ್ಮ ವಾದ ಆಲಿಸಲಾಗುವುದು” ಎಂದಿತು.

ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿಸಿ, ವಿಚಾರಣೆ ಮುಂದೂಡಿತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ಪ್ರಜ್ವಲ್‌ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಆನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಜ್ವಲ್‌ ಅರ್ಜಿ ತಿರಸ್ಕೃತಗೊಂಡಿತ್ತು. ಈಗ ಕಳೆದ ಮಾರ್ಚ್‌ನಲ್ಲಿ ಪ್ರಜ್ವಲ್‌ ಮತ್ತೆ ಎರಡನೇ ಬಾರಿಗೆ ಜಾಮೀನು ಕೋರಿದ್ದರು. ಇತ್ತೀಚೆಗಷ್ಟೆ ಮೊದಲ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ರನ್ನು ಆರೋಪ ಮುಕ್ತಗೊಳಿಸಲು ನಿರಾಕರಿಸಿದ್ದ ವಿಚಾರಣಾಧೀನ ನ್ಯಾಯಾಲಯವು, ಆರೋಪ ನಿಗದಿ ಮಾಡಿ ಆದೇಶಿಸಿತ್ತು.

Read More
Next Story