ಮದುವೆಯಾಗುವುದಾಗಿ ವಂಚನೆ | ಅತ್ಯಾಚಾರ ಆರೋಪ; ಬಿಜೆಪಿ ಮುಖಂಡ ಪೊಲೀಸ್ ವಶಕ್ಕೆ
x
ಶರತ್‌ ಕಲ್ಯಾಣಿ

ಮದುವೆಯಾಗುವುದಾಗಿ ವಂಚನೆ | ಅತ್ಯಾಚಾರ ಆರೋಪ; ಬಿಜೆಪಿ ಮುಖಂಡ ಪೊಲೀಸ್ ವಶಕ್ಕೆ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ಲಕ್ಷ- ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


Click the Play button to hear this message in audio format

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆಯಿಂದಲೇ ಲಕ್ಷ- ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಬಿಜೆಪಿ ಮಾಧ್ಯಮ ಪ್ರಮುಖನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ಶರತ್ ಕಲ್ಯಾಣಿ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶರತ್ ಕಲ್ಯಾಣಿಯನ್ನು ಮಹಿಳಾ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದ ಮೂವರ ತಂಡ ಕಾರ್ಯಾಚರಣೆ ನಡೆಸಿ ಬಿಜಾಪುರ ತಾಲೂಕಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯು ಜುಲೈ 26ರ ರಾತ್ರಿ 8 ಗಂಟೆಗೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆಗೆ 2023 ರ ಆಗಸ್ಟ್ 31ರಿಂದ ಪರಿಚಯವಿತ್ತು ಎನ್ನಲಾಗಿದೆ. ಶರತ್ ಕಲ್ಯಾಣಿಯು ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ತಾನಿನ್ನೂ ಅವಿವಾಹಿತನಾಗಿದ್ದು ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಏಳೆಂಟು ತಿಂಗಳಿಂದ ನಿರಂತರ ಸಂಪರ್ಕದಲ್ಲಿದ್ದ ಕಾರಣ ತನ್ನನ್ನು ಮದುವೆಯಾಗು ಎಂದು ಮಹಿಳೆ ಒತ್ತಾಯಿಸಿದಾಗ, ನನಗೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ ಎಂದು ಶರತ್ ಭರವಸೆ ನೀಡಿದ್ದ. ಅಲ್ಲದೆ ಈಗ ನನಗೆ ಸಹಾಯ ಮಾಡು ಎಂದು ಕೇಳಿದಾಗ ಮಹಿಳೆಯು (ಹಲವು ಬಾರಿ) ಒಟ್ಟು ನಾಲ್ಕು ಲಕ್ಷ ಹಣವನ್ನು ಶರತ್ ಕಲ್ಯಾಣಿ ಗೆ ನೀಡಿದ್ದರು ಎನ್ನಲಾಗಿದೆ.

ಮದುವೆಗೆ ಮಹಿಳೆಯ ಒತ್ತಾಯ ಮುಂದುವರಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ ಫೋನ್ ಸಂಪರ್ಕ ಸಹ ಕಡಿದುಕೊಂಡಿದ್ದ. ಈ ಬಗ್ಗೆ ಕೇಳಲು ಮಹಿಳೆ ಶಿವಮೊಗ್ಗ ಗುಂಡಪ್ಪ ಶೆಡ್ಡಿನಲ್ಲಿರುವ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹೊಡೆದು ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ನನ್ನಿಂದಲೇ ಹಣ ಪಡೆದ ಶರತ್ ಕಲ್ಯಾಣಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಮಹಿಳಾ ಠಾಣೆ ಪೊಲೀಸರು ಕಲಂ 376(2)(ಎನ್), 420,354,504,323, ಹಾಗೂ 506, ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಶರತ್ ಕಲ್ಯಾಣಿ ವಜಾ

ಈ ನಡುವೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶರತ್ ಕಲ್ಯಾಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸ್ತುತ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಆದೇಶಿದ್ದಾರೆ.

ಶರತ್ ಕಲ್ಯಾಣಿ ವಿರುದ್ಧ ಅತ್ಯಾಚಾರ, ವಂಚನೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಮೂಲಗಳು ಹೇಳಿವೆ.

Read More
Next Story