
ಅತ್ಯಾಚಾರ ಪ್ರಕರಣ | ವಿನಯ ಕುಲಕರ್ಣಿ ವಿರುದ್ಧದ ಪ್ರಕರಣ ತನಿಖೆ ಸಿಐಡಿಗೆ
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಜತೆಗೆ, ಸಂತ್ರಸ್ತೆ ವಿರುದ್ಧ ವಿನಯ್ ಕುಲಕರ್ಣಿ ದಾಖಲಿಸಿರುವ ಪ್ರಕರಣವನ್ನೂ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ವಿರುದ್ಧ ರೈತ ಹೋರಾಟಗಾರ್ತಿ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿ, ಪೊಲೀಸ್ ದೂರು ನೀಡಿದ್ದರು. ವಿನಯ್ ಕುಲಕರ್ಣಿ ವಿರುದ್ಧ ಜೀವ ಬೆದರಿಕೆ, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ವಿನಯ್ ಕುಲಕರ್ಣಿ ಅತ್ಯಾಚಾರವೆಸಗಿದ್ದರೆಂದು ಹಾವೇರಿಯ ಮಹಿಳೆ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ವೇಳೆ, ಸಂತ್ರಸ್ತ ಮಹಿಳೆಯ ವಿರುದ್ಧ ವಿನಯ್ ಕುಲಕರ್ಣಿ ಕೂಡ ಪ್ರತಿದೂರು ದಾಖಲಿಸಿ, ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥನೊಬ್ಬನೊಂದಿಗೆ ಸಂಚು ಮಾಡಿ ಎರಡು ಕೋಟಿ ರೂಪಾಯಿ ನೀಡುವಂತೆ ರೈತ ಮಹಿಳೆ ಬ್ಲ್ಯಾಕ್ಮೇಲ್ ಮಾಡಿದ್ದರು ಎಂದು ಆರೋಪಿಸಿದ್ದರು.
ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತೆಯಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿನಯ್ ಕುಲಕರ್ಣಿ ಅತ್ಯಾಚಾರ ಎಸಗಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೈತ ಮಹಿಳೆ ಮಾಡಿದ ಆರೋಪದ ಮೇಲೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ, ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ ವಿರುದ್ಧವೇ ವಿನಯ್ ಕುಲಕರ್ಣಿ ಪ್ರತಿದೂರು ದಾಖಲಿಸಿದ್ದರು.
ಸಂತ್ರಸ್ತ ಮಹಿಳೆ ಹಾಗೂ ಖಾಸಗಿ ಚಾನೆಲ್ ಮುಖ್ಯಸ್ಥರೊಬ್ಬರ ವಿರುದ್ಧ ಬ್ಲ್ಯಾಕ್ಮೇಲ್ ಆರೋಪದಡಿ ವಿನಯ್ ಕುಲಕರ್ಣಿ ಪ್ರತಿ ದೂರು ನೀಡಿದ್ದರು. ಆಕೆ ತನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ, ಆಕೆಯ ಹಿನ್ನೆಲೆ ಕುರಿತು ಟಿವಿ ವರದಿಗಳು ಬಂದ ಬಳಿಕ ಆಕೆಯಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದೇನೆ. ಆಕೆಯನ್ನು ಎಂದೂ ʼಟಚ್ʼ ಕೂಡ ಮಾಡಿಲ್ಲ. ʼಟಚ್ʼ ಮಾಡಿದ್ದರೆ, ನನ್ನ ತಾಯಿಯನ್ನೇ ʼಟಚ್ʼ ಮಾಡಿದಂತೆ. ಇದೆಲ್ಲಾ ಬ್ಲ್ಯಾಕ್ಮೇಲ್ ಷಢ್ಯಂತ್ರ. ಅಲ್ಲದೆ, ಕೆಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನಗಿರುವ ಅವಕಾಶವನ್ನು ತಪ್ಪಿಸುವ ರಾಜಕೀಯ ಕುತಂತ್ರ ಕೂಡ ಅಡಗಿದೆ ಎಂದು ವಿನಯ್ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

