
ರನ್ಯಾ ರಾವ್
Rayna Rao Case| ರನ್ಯಾ ರಾವ್ ಬಂಧನ ಕಾನೂನುಬಾಹಿರ; ಹೈಕೋರ್ಟ್‌ನಲ್ಲಿ ವಕೀಲರ ವಾದ
ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ನಡೆಸಿತ್ತು.
ಚಿತ್ರನಟಿ ಹರ್ಷವರ್ಧಿನಿ ರನ್ಯಾ ರಾವ್ ಅವರನ್ನು ಚಿನ್ನದ ಕಳ್ಳಸಾಗಣೆ ಆರೋಪದಡಿ ಬಂಧಿಸಿರುವುದು ಕಾನೂನುಬಾಹಿರ ಎಂದು ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಇದೇ ವೇಳೆ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ ೨೧ಕ್ಕೆ ಮುಂದೂಡಿದ್ದು, ಆದಾಯ ತನಿಖಾ ನಿರ್ದೇಶನಾಲಯ (ಡಿಆರ್‌ಐ)ಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿದೆ.
ರನ್ಯಾ ರಾವ್ ಅವರನ್ನು ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ದುಬೈನಿಂದ 14.8 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಈ ಬಂಧನ ನಡೆದಿತ್ತು. ಈ ಚಿನ್ನದ ಮೌಲ್ಯ ಸುಮಾರು 12.56 ಕೋಟಿ ರೂಪಾಯಿಗಳಾಗಿದ್ದು, ರನ್ಯಾ ಅವರ ಮನೆಯಲ್ಲಿ ನಡೆದ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.
ವಕೀಲರ ವಾದವೇನು?
ರನ್ಯಾ ರಾವ್ ಅವರ ವಕೀಲ ಸಂದೇಶ್ ಚೌಟ, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಮುಂದೆ ವಾದ ಮಂಡಿಸುತ್ತಾ, ಬಂಧನ ಮತ್ತು ಶೋಧ ಕಾರ್ಯಾಚರಣೆ ವೇಳೆ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 102ರ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಶೋಧ ಕಾರ್ಯಾಚರಣೆಯನ್ನು ಗೆಜೆಟೆಡ್ ಅಧಿಕಾರಿಯ ಸಮ್ಮುಖದಲ್ಲಿ ಅಥವಾ ಮ್ಯಾಜಿಸ್ಟ್ರೇಟ್‌ನ ಉಪಸ್ಥಿತಿಯಲ್ಲಿ ನಡೆಸಬೇಕು. ಆದರೆ, ರನ್ಯಾ ರಾವ್ ಅವರನ್ನು ಶೋಧಿಸಿದಾಗ ಈ ನಿಯಮವನ್ನು ಪಾಲಿಸಲಾಗಿಲ್ಲ ಎಂದು ಹೇಳಿದರು.
ಡಿಆರ್‌ಐ ಸಲ್ಲಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಚೌಟ ಆರೋಪಿಸಿದರು. "ಮಹಜರ್‌ನಲ್ಲಿ ರನ್ಯಾ ಅವರ ಒಪ್ಪಿಗೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಮತ್ತು ಶೋಧವನ್ನು ನಡೆಸಿದ ಅಧಿಕಾರಿಯನ್ನೇ ಗೆಜೆಟೆಡ್ ಅಧಿಕಾರಿಯಾಗಿ ತೋರಿಸಲಾಗಿದೆ," ಎಂದು ಅವರು ವಾದಿಸಿದರು. ಇದಲ್ಲದೆ, ಸುಪ್ರೀಂ ಕೋರ್ಟ್‌ನ ಡಿಕೆ ಬಸು ವಿರುದ್ಧ ವೆಸ್ಟ್ ಬೆಂಗಾಲ್ ರಾಜ್ಯದ ತೀರ್ಪಿನ ಮಾರ್ಗಸೂಚಿಗಳನ್ನು ಡಿಆರ್‌ಐ ಅಧಿಕಾರಿಗಳು ಪಾಲಿಸಿಲ್ಲ ಎಂದು ಮನವರಿಕೆ ಮಾಡಿದರು. ಈ ಮಾರ್ಗಸೂಚಿಗಳ ಪ್ರಕಾರ, ಬಂಧನದ ಸಮಯದಲ್ಲಿ "ಬಂಧನದ ಕಾರಣಗಳನ್ನು" ಸ್ಪಷ್ಟವಾಗಿ ತಿಳಿಸಬೇಕು, ಆದರೆ ರನ್ಯಾ ಅವರಿಗೆ ಕೇವಲ ಬಂಧನದ ಮೆಮೊ ನೀಡಲಾಗಿತ್ತು ಎಂದು ಹೇಳಿದರು.
ಡಿಆರ್‌ಐನ ಆಕ್ಷೇಪಣೆ
ಡಿಆರ್‌ಐ ವಕೀಲ ಮಧು ರಾವ್, ರನ್ಯಾ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು ಎಂದು ತಿಳಿಸಿದರು. "ರನ್ಯಾ ಅವರು ದುಬೈನ ನಿವಾಸಿ ಗುರುತಿನ ಚೀಟಿಯನ್ನು ಹೊಂದಿದ್ದಾರೆ, ಇದರಿಂದ ಅವರು ದೇಶದಿಂದ ಓಡಿಹೋಗುವ ಸಾಧ್ಯತೆಯಿದೆ," ಎಂದು ವಕೀಲರು ಆಕ್ಷೇಪಿಸಿದರು. ಇದರ ಜೊತೆಗೆ, ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ಅಂತಾರಾಷ್ಟ್ರೀಯ ಹವಾಲಾ ಸಂಪರ್ಕಗಳನ್ನು ಹೊಂದಿದೆ ಎಂದು ಅವರು ವಾದಿಸಿದರು.