Ramulu vs Reddy | ಬಿಜೆಪಿ ಹೈಕಮಾಂಡ್‌ ಆತಂಕ: ಸಂಘರ್ಷ ಶಮನಕಕ್ಕೆ ತಾಕೀತು
x

Ramulu vs Reddy | ಬಿಜೆಪಿ ಹೈಕಮಾಂಡ್‌ ಆತಂಕ: ಸಂಘರ್ಷ ಶಮನಕಕ್ಕೆ ತಾಕೀತು


ಮಾಜಿ ಸಚಿವರಾದ ಬಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಬಿಜೆಪಿಯ ಹೊಸ ಸಂಘರ್ಷ ಶಮನಕ್ಕೆ ಮುಂದಾಗಿರುವ ಪಕ್ಷದ ದೆಹಲಿ ವರಿಷ್ಠರು, ಇಬ್ಬರೂ ನಾಯಕರ ನಡುವಿನ ವಾಕ್ಸಮರ ಪಕ್ಷಕ್ಕೆ ಧಕ್ಕೆ ತರದಂತೆ ಎಚ್ಚರಿಕೆ ವಹಿಸುವಂತೆ ರಾಜ್ಯ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಒಂದು ಕಾಲದ ಆಪ್ತ ಮಿತ್ರರಾಗಿದ್ದ ಇಬ್ಬರೂ ನಾಯಕರ ನಡುವೆ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಆಕ್ರೋಶ ಭುಗಿಲೆದ್ದಿದೆ. ಕೋರ್ ಕಮಿಟಿ ಸಭೆಯ ಬೆನ್ನಲ್ಲೇ ಇಬ್ಬರೂ ನಾಯಕರು ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿದ್ದರು. ಅದರ ಬೆನ್ನಲ್ಲೇ ಇಬ್ಬರೂ ಪ್ರಭಾವಿ ನಾಯಕರ ನಡುವಿನ ಈ ವಾಕ್ಸಮರ ಪಕ್ಷದಲ್ಲಿ ಈಗಾಗಲೇ ಭುಗಿಲೆದ್ದಿರುವ ಭಿನ್ನಮತಕ್ಕೆ ತುಪ್ಪ ಸುರಿದಿತ್ತು. ರಾಜ್ಯ ಬಿಜೆಪಿ ಭಿನ್ನಮತ, ಅಂತಃಕಲಹದಲ್ಲಿ ಮುಳುಗಿರುವ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತ್ತು.

ಈ ಬೆಳವಣಿಗೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂಬ ಆತಂಕಗೊಂಡಿರುವ ದೆಹಲಿ ವರಿಷ್ಠರು, ಈಗಾಗಲೇ ಭಿನ್ನಮತದ ಬೇಗುದಿಯಲ್ಲಿ ಬೇಯುತ್ತಿರುವ ಪಕ್ಷದ ಪ್ರಮುಖ ಇಬ್ಬರೂ ನಾಯಕರ ನಡುವಿನ ಈ ಬೀದಿ ರಂಪ ಮತ್ತೊಂದು ತಲೆನೋವು ತಂದಿದೆ. ಹಾಗಾಗಿಯೇ ಇಬ್ಬರೂ ನಾಯಕರ ನಡುವಿನ ಈ ಬೇಗುದಿ ಶಮನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದು, ಆ ಸಂಘರ್ಷ ಇನ್ನಷ್ಟು ಬೆಳೆಯದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದಾರೆ.

ಬಳ್ಳಾರಿಯಲ್ಲಿ ಸರಣಿ ಸಭೆ

ಈ ನಡುವೆ, ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪಕ್ಷ ತೊರೆಯುವ ಮಾತನಾಡಿರುವ ಬಿ ಶ್ರೀರಾಮುಲು ಅವರಿಗೆ ದೆಹಲಿ ವರಿಷ್ಠರು ಕರೆ ಮಾಡಿ ಮಾತನಾಡಿದ್ದು, ದೆಹಲಿಗೆ ಬರುವಂತೆ ಸೂಚಿಸಿದ್ದರು. ಆದರೆ, ಶ್ರೀರಾಮುಲು ಅವರು ದೆಹಲಿ ಭೇಟಿಗೆ ಕಾಲಾವಕಾಶ ಕೋರಿದ್ದು, ಒಂದು ವಾರದ ಬಳಿಕ ಬರುವುದಾಗಿ ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ಬಳ್ಳಾರಿಯ ತಮ್ಮ ನಿವಾಸದಲ್ಲಿ ಶ್ರೀರಾಮುಲು ಸಾಲು-ಸಾಲು ಸಭೆಗಳನ್ನು ನಡೆಸುತ್ತಿದ್ದು ತಮ್ಮ ಆಪ್ತರು ಮತ್ತು ಹಿತೈಷಿಗಳೊಂದಿಗೆ ಚರ್ಚಿಸುತ್ತಿದ್ದಾರೆ.

ಈ ನಡುವೆ ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ತಮಗೇ ಸೆಡ್ಡು ಹೊಡೆಯುತ್ತಿರುವ ವಾಲ್ಮೀಕಿ ನಾಯಕ ಸಮುದಾಯದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಗ್ಗುಬಡಿಯಲು ಅವರದೇ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆತಂದು ರಾಜಕೀಯ ಪ್ರತಿದಾಳ ಉರುಳಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಂತ್ರ ಹೆಣೆದಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದರು. ಆ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಶ್ರೀರಾಮುಲು ಅವರನ್ನು ಬಿಜೆಪಿಯಿಂದ ಹೊರಹಾಕಲು ಹೆಣೆದಿರುವ ಕಟ್ಟುಕತೆ ಅದು. ರಾಮುಲು ಅವರನ್ನು ಹೊರ ಹಾಕಲು ಅವರದೇ ಪಕ್ಷದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ್ದರು.

ಕುತೂಹಲ ಮೂಡಿಸಿದ ಶ್ರೀರಾಮುಲು ನಡೆ

ಈ ಎಲ್ಲಾ ಚರ್ಚೆಗಳ ನಡುವೆಯೇ ದೆಹಲಿ ಬಿಜೆಪಿ ವರಿಷ್ಠರು ತಮಗೆ ಎದುರಾಗಿರುವ ಕರ್ನಾಟಕ ಬಿಜೆಪಿಯ ಹೊಸ ಸವಾಲನ್ನು ಹೇಗೆ ನಿಭಾಯಿಸುವುದು ಎಂಬ ಲೆಕ್ಕಾಚಾರದಲ್ಲಿ ಇದ್ದು, ಸದ್ಯಕ್ಕೆ ಬಹಿರಂಗ ಹೇಳಿಕೆ ನೀಡದಂತೆ ಇಬ್ಬರೂ ನಾಯಕರಿಗೆ ತಾಕೀತು ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ, ಮುನಿಸಿಕೊಂಡಿರುವ ಶ್ರೀರಾಮುಲು ಅವರನ್ನು ದೆಹಲಿಗೆ ಕರೆತರುವ ಹೊಣೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ.

ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಖುದ್ದು ಕರೆ ಮಾಡಿ ಮಾತನಾಡಿದಾಗ ದೆಹಲಿಗೆ ಬಂದು ಮಾತನಾಡುವಂತೆ ಸೂಚಿಸಿದ್ದರು. ಆಗ ಆ ಮಾತಿಗೆ ಒಪ್ಪಿಗೆ ನೀಡಿದ್ದರು ಎನ್ನಲಾದ ಶ್ರೀರಾಮುಲು ಅವರು ದಿಢೀರನೇ ದೆಹಲಿ ಭೇಟಿಗೆ ಒಂದು ವಾರ ಕಾಲ ಕಾಲಾವಕಾಶ ಕೋರಿರುವುದು ಮತ್ತು ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರ ಸರಣಿ ಸಭೆಗಳನ್ನು ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ, ಅವರ ಮುಂದಿನ ನಡೆಯ ಕುರಿತು ತೀವ್ರ ಕುತೂಹಲ ಮೂಡಿಸಿದೆ.

ನಿಮ್ಮೊಂದಿಗೆ ನಾವಿದ್ದೇವೆ ಎಂದ ವರಿಷ್ಠರು

ಈ ನಡುವೆ, ಶುಕ್ರವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶ್ರೀರಾಮುಲು, ಜೆಪಿ ನಡ್ಡಾ ಗುರುವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ಏನೇನು ನಡೆದಿದೆ ಎಂಬುದನ್ನು ಅವರಿಗೆ ವಿವರಿಸಿದ್ದೇನೆ. ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ಅಗರವಾಲ್ ಮಾತನಾಡಿದ ವಿಚಾರಗಳ ಬಗ್ಗೆಯೂ ಹೇಳಿದ್ದೇನೆ ಎಂದರು.

‘ರಾಮುಲು, ನಿಮ್ಮ ಪರವಾಗಿ ನಾನಿದ್ದೇನೆ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರುವುದಾದರೆ ಬನ್ನಿ’ ಎಂದು ನಡ್ಡಾ ಹೇಳಿರುವುದಾಗಿ ರಾಮುಲು ಹೇಳಿದ್ದಾರೆ. ದೆಹಲಿಗೆ ಬರುವುದಾಗಿಯೂ, ಅಪಾಯಿಟ್ಮೆಂಡ್ ತೆಗೆದುಕೊಂಡು ಬರುವುದಾಗಿಯೂ ನಡ್ಡಾ ಅವರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ (ರಾಮುಲು). ಯಾವಾಗ ಬೇಕಿದ್ದರೂ ದೆಹಲಿಗೆ ಬನ್ನಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಸುದ್ದಿ ಮುಟ್ಟಿಸಿದ್ದೇವೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಪ್ರಲ್ಹಾದ್ ಜೋಶಿಯವರೂ ಕರೆ ಮಾಡಿ ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ದರು. ಆದರೆ, ಅಷ್ಟೊತ್ತಿಗೆ ನಡ್ಡಾ ಅವರೇ ಕರೆ ಮಾಡಿದ್ದಾರೆ ಎಂದು ರಾಮುಲು ತಿಳಿಸಿದ್ದಾರೆ.

Read More
Next Story