CAFE BLAST | ಕೆಲವೇ ತಾಸಿನಲ್ಲಿ 10 ಬಸ್‌ ಬದಲಾಯಿಸಿದ್ದ ಶಂಕಿತ !
x
ರಾಮೇಶ್ವರಂ ಕೆಫೆ ಸ್ಫೋಟ

CAFE BLAST | ಕೆಲವೇ ತಾಸಿನಲ್ಲಿ 10 ಬಸ್‌ ಬದಲಾಯಿಸಿದ್ದ ಶಂಕಿತ !

40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ | ಡಮ್ಮಿ ಪೋನ್‌ ಬಳಸಿದ್ದ ಶಂಕಿತ ಉಗ್ರ


ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಶಂಕಿತ ಉಗ್ರನ ಚಲನವಲನಗಳ ಬಗ್ಗೆ ಮಹತ್ವದ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇರಿಸಿದ ಶಂಕಿತ ಉಗ್ರ ಹತ್ತಕ್ಕೂ ಹೆಚ್ಚು ಬಸ್‌ಗಳನ್ನು ಬದಲಾಯಿಸಿದ್ದ. ಬಸ್‌ ನಿಲ್ದಾಣದಲ್ಲಿಯೇ ಟೈಮರ್‌ ಫಿಕ್ಸ್‌ ಮಾಡಿದ್ದ ಎನ್ನಲಾದ ಘಟನೆ ಇಲ್ಲಿನ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಐಟಿಪಿಎಲ್‌ ಮಾರ್ಗವಾಗಿ ಬಸ್‌ನಲ್ಲಿ ಬಂದ ಶಂಕಿತ ಮಾರ್ಚ್‌ 1ರ ಬೆಳಿಗ್ಗೆ 10:45ಕ್ಕೆ ಕುಂದಲಹಳ್ಳಿ ಬಸ್‌ ನಿಲ್ದಾಣದಲ್ಲಿ ಇಳಿದಿದ್ದಾನೆ. ಇಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ಕಳೆದಿದ್ದಾನೆ. ನಂತರ ಬೆಳಿಗ್ಗೆ 11:34ರ ಸುಮಾರಿಗೆ ರಾಮೇಶ್ವರಂ ಕೆಫೆ ಪ್ರವೇಶಿಸಿದ್ದು, ನಂತರ ನೇರವಾಗಿ ಕೌಂಟರ್‌ಗೆ ತೆರಳಿ ರವೆ ಇಡ್ಲಿ ತೆಗೆದುಕೊಂಡಿದ್ದಾನೆ. ಇದಾದ ಕೆಲವೇ ನಿಮಿಷದಲ್ಲಿ ರವೆ ಇಡ್ಲಿ ಸೇವಿಸಿ, ಬಾಂಬ್‌ ಇರುವ ಬ್ಯಾಗ್‌ ಅನ್ನು ಕೆಫೆಯಲ್ಲೇ ಬಿಟ್ಟು 11:43ರ ವೇಳೆಗೆ ಕೆಫೆಯಿಂದ ವಾಪಸ್‌ ಆಗಿದ್ದಾನೆ.

ಇದಾದ ನಂತರದಲ್ಲಿ ಶಂಕಿತ ಕುಂದಲಹಳ್ಳಿ ಬಸ್‌ ಹತ್ತಿ ಕಾಡುಗೋಡಿಗೆ ಹೋಗಿದ್ದಾನೆ. ಆ ಬಳಿಕ ಎಲ್ಲಿಗೆ ಹೋಗಿದ್ದಾನೆ ಎನ್ನುವ ಬಗ್ಗೆ ಸ್ಪಷ್ಟವಾದ ಸುಳಿವು ಸಿಕ್ಕಿಲ್ಲ. ಹೀಗಾಗಿ, ಈ ಮುಂದಿನ ಹಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

40ಕ್ಕೂ ಹೆಚ್ಚು ಕ್ಯಾಮೆರಾಗಳ ಪರಿಶೀಲನೆ

ಶಂಕಿತ ಉಗ್ರನ ಚಲನವಲಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಕರ್ನಾಟಕದ ಪೊಲೀಸರು 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಕುಂದಲಹಳ್ಳಿ, ಕೆ.ಆರ್‌.ಪುರ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮಾರತ್ತಹಳ್ಳಿ, ಹೆಬ್ಬಾಳ ಹಾಗೂ ಎಚ್‌ಎಎಲ್‌ ಸೇರಿದಂತೆ ರಾಮೇಶ್ವರಂ ಕೆಫೆಯ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಚೆಕ್‌ ಮಾಡಲಾಗಿದೆ.

ಇನ್ನು ಶಂಕಿತ ಉಗ್ರ ಹೋಟೆಲ್‌ ಪ್ರವೇಶಿಸುವಾಗ ಹಾಗೂ ವಾಪಸ್‌ ಬರುವ ಸಂದರ್ಭದಲ್ಲಿ ಡಮ್ಮಿ ಮೊಬೈಲ್‌ ಬಳಸಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಪೊಲೀಸರು ನೆಟವರ್ಕ್‌ ಪರಿಶೀಲನೆ ನಡೆಸಿದ್ದಾರೆ. ಆದರೆ, ಟವರ್‌ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಶಂಕಿತ ಡಮ್ಮಿ ಮೊಬೈಲ್‌ ಫೋನ್‌ ಬಳಸಿದ್ದ ಎನ್ನಲಾಗಿದೆ. ಶಂಕಿತ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

Read More
Next Story