CAFE BLAST | ಮಾಸ್ಕ್‌, ಕ್ಯಾಪ್‌ ಧರಿಸಿದ್ದ ಶಂಕಿತನ ಚಹರೆ ಪತ್ತೆ!
x

CAFE BLAST | ಮಾಸ್ಕ್‌, ಕ್ಯಾಪ್‌ ಧರಿಸಿದ್ದ ಶಂಕಿತನ ಚಹರೆ ಪತ್ತೆ!


ಶುಕ್ರವಾರ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಯ ಚಹರೆಯನ್ನು ಪತ್ತೆ ಹಚ್ಚಲಾಗಿದೆ. ಶಂಕಿತ ವ್ಯಕ್ತಿಯೇ ಸ್ಫೋಟಕ ವಸ್ತು ಸಮೇತ ಬ್ಯಾಗ್ ಇರಿಸಿದ್ದ ಎಂಬ ಮಾಹಿತಿ‌ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

ಆ ವ್ಯಕ್ತಿಯು ಮುಖಕ್ಕೆ ಮಾಸ್ಕ್, ಕಣ್ಣಿಗೆ ಕಪ್ಪು ಕನ್ನಡಕ, ತಲೆಗೆ ಕ್ಯಾಪ್ ಧರಿಸಿ ಬಂದಿದ್ದನು. ಉಪಹಾರ ಗೃಹದಲ್ಲಿ ರವೆ ಇಡ್ಲಿ ತಿಂದಿರುವ ಆರೋಪಿ ನಂತರ ಬ್ಯಾಗ್ ಇಟ್ಟು ತೆರಳಿದ್ದಾನೆ ಎಂಬ ಮಾಹಿತಿ‌ಯನ್ನು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವ್ಯಕ್ತಿಯ ಚಹರೆಯ ಬೆನ್ನುಹತ್ತಿರುವ ಪೊಲೀಸ್ ತಂಡಗಳು, ಕೃತ್ಯಕ್ಕೂ ಮುನ್ನ ಮತ್ತು ನಂತರ ಆರೋಪಿ ವೈಟ್ ಫೀಲ್ಡ್, ಮಾರತ್ಹಳ್ಳಿ ಭಾಗದಲ್ಲಿ ಓಡಾಡಿರುವುದು ಪತ್ತೆಯಾಗಿದ್ದು, ಮುಂಜಾನೆ 3 ಗಂಟೆವರೆಗೂ ಪೊಲೀಸರು ತಲಾಶ್ ನಡೆಸಿದ್ದಾರೆ.

ಆರೋಪಿಗಾಗಿ ಪಕ್ಕದ ರಾಜ್ಯಗಳಲ್ಲಿಯೂ ಹುಡುಕಾಟ ನಡೆಸಲಾಗುತ್ತಿದೆ. ಕೇರಳ, ತಮಿಳುನಾಡಿಗೂ ಸಹ ತಂಡಗಳು ತೆರಳಿರುವುದಾಗಿ ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಸಿಸಿಬಿ ವಿಶೇಷ ತಂಡಗಳಿಂದ ಆರೋಪಿಗಾಗಿ ಹುಡುಕಾಟ ಮುಂದುವರೆದಿದ್ದು, ಉಪಹಾರ ಗೃಹದಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿರುವ ಶಂಕಿತ ಆರೋಪಿಯನ್ನು ಹೋಲುವ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವೈಟ್ ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ತಂಡಗಳು ತನಿಖೆ ಮುಂದುವರೆಸಿವೆ.

ಈ ಬಗ್ಗೆ ಎಕ್ಸ್ (ಟ್ವಿಟ್ಟರ್)ನಲ್ಲಿ ಟ್ವೀಟ್‌ ಮಾಡಿರುವ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ʼʼಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಮಾಧ್ಯಮದವರು ಸಹಕರಿಸಬೇಕುʼʼ ಮನವಿ ಮಾಡಿಕೊಂಡಿದ್ದಾರೆ.

Read More
Next Story