CAFE BLAST CASE | ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಎನ್ ಐಎ ಶೋಧ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಬುಧವಾರ ಶೋಧ ಮುಂದುವರಿಸಿದ್ದಾರೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟ್ಟಮಕ್ಕಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ 5ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿರುವ ಎನ್‌ಐಎ ತಂಡದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ.
ಚೆನ್ನೈನಲ್ಲೂ ಎನ್‌ಐಎ
ಇದೇ ವೇಳೆ ಚೆನ್ನೈನ ಮೂರು ಕಡೆ ಕೂಡ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ.
ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ. ತಮಿಳುನಾಡಿನಲ್ಲಿ ನಡೆದಿರುವ ಎನ್‌ಐಎ ದಾಳಿ ಕೂಡ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಬಾಂಬ್ ಇಟ್ಟಿದ್ದ ಉಗ್ರ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ ಎಂಬ ಶಂಕೆಯೂ ನಂತರದಲ್ಲಿ ವ್ಯಕ್ತವಾಗಿತ್ತು. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದ. ಉಗ್ರ ಧರಿಸಿದ್ದ 10 ನಂಬರ್ನ ಟೋಪಿಯ ಬ್ರ್ಯಾಂಡ್ನ ಜಾಡು ಹಿಡಿದ ಎನ್‌ಐಎ ಅಧಿಕಾರಿಗಳಿಗೆ ಅದು ಚೆನ್ನೈಯಿಂದ ಖರೀದಿಸಿದ್ದೆಂಬುದು ತಿಳಿದುಬಂದಿತ್ತು.
ಮಾರ್ಚ್ 1 ರಂದು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಐದು ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿ ಪೊಲೀಸರು ವಹಿಸಿಕೊಂಡಿದ್ದರು. ನಂತರ ಪ್ರಕರಣದ ಗಂಭೀರತೆ ಅರಿತು ಸರ್ಕಾರ ತನಿಖೆಯನ್ನು ಎನ್ಐಎಗೆ ವರ್ಗಾಯಿಸಿತ್ತು.