Cafe Blast Case | ಒಂದು ವಾರದಲ್ಲೇ ಬಾಂಬ್‌ ತಯಾರಿಸಿದ್ದ ಆರೋಪಿಗಳು
x

Cafe Blast Case | ಒಂದು ವಾರದಲ್ಲೇ ಬಾಂಬ್‌ ತಯಾರಿಸಿದ್ದ ಆರೋಪಿಗಳು

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಆರು ಮಂದಿ ಆರೋಪಿಗಳು ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದು, ಬಾಂಬ್‌ ತಯಾರಿಕೆ ತರಬೇತಿ ಪಡೆದಿದ್ದರು.


ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸ್ಪೋಟಕ ಸಂಗತಿ ಬಯಲಾಗಿದೆ.

ಬಾಂಬ್ ಸ್ಪೋಟ ಪ್ರಕರಣದ ಆರು ಮಂದಿ ಆರೋಪಿಗಳು ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದರಲ್ಲದೇ ಸುಧಾರಿತ ಬಾಂಬ್‌ ತಯಾರಿಕೆಯ ತರಬೇತಿ ಸಹ ಪಡೆದಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಂಬ್ ಸ್ಫೋಟಕ್ಕೆ ಯಾರೆಲ್ಲಾ ತರಬೇತಿ ಪಡೆದಿದ್ದರು. ಅವರಿಗೆ ಯಾರು ತರಬೇತಿ ನೀಡಿದ್ದು, ಎಷ್ಟು ದಿನಗಳ ತರಬೇತಿ ನೀಡಲಾಗಿತ್ತು ಎಂಬ ಸಂಗತಿಗಳನ್ನು ಎನ್‌ಐಎ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್ ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದರು. ಆರು ಜನರ ಪೈಕಿ ಅಬ್ದುಲ್ ಮತೀನ್ ತಾಹ, ಮುಸಾವೀರ್, ಶಾರಿಕ್ ಹಾಗೂ ಮಾಜ್ ಮುನೀರ್ ಗೆ ಐಸಿಸ್ ಉಗ್ರರು ಬಾಂಬ್ ತಯಾರಿಕೆ ತರಬೇತಿ ನೀಡಿದ್ದರು. ಆನ್‌ಲೈನ್‌ ಮೂಲಕ ಒಂದು ವಾರದಲ್ಲೇ ಐಸಿಸ್ ಉಗ್ರರಿಂದ ಬಾಂಬ್‌ ತಯಾರಿಕೆ ತರಬೇತಿ ಪಡೆದಿದ್ದರು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಆನ್‌ಲೈನ್‌ನಲ್ಲೇ ಕಚ್ಛಾ ವಸ್ತು ಖರೀದಿ

ಬಾಂಬ್ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಆರೋಪಿಗಳು ಆನ್ಲೈನ್ ಮೂಲಕ ಖರೀದಿಸುತ್ತಿದ್ದರು. ರಾಮೇಶ್ವರ ಕೆಫೆಯಲ್ಲಿ ಸ್ಫೋಟಿಸಿದ ಬಾಂಬನ್ನು ಐಸಿಸ್‌ ಉಗ್ರರು ನೀಡಿದ ತರಬೇತಿಯಂತೆ ತಯಾರಿಸಿದ್ದರು. ಅಲ್ಲದೇ ಮಂಗಳೂರು ಕುಕ್ಕರ್ ಬಾಂಬ್, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬುಗಳನ್ನು ಒಂದು ವಾರದಲ್ಲಿ ತಯಾರಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಬಾಂಬ್ ಇಡುವ ಸ್ಥಳ ಅಂತಿಮವಾದ ಬಳಿಕ ಆರೋಪಿಗಳು ಬಾಂಬ್ ತಯಾರಿಕೆಗೆ ಮುಂದಾಗುತ್ತಿದ್ದರು. ಬಾಂಬುಗಳಿಗೆ 90 ನಿಮಿಷಗಳ ಟ್ರೈಮರ್ ಇಡುತ್ತಿದ್ದರು. ಮೂರೂ ಘಟನೆಗಳಲ್ಲಿಯೂ (ಮಂಗಳೂರು, ಬಿಜೆಪಿ ಕಚೇರಿ ಹಾಗೂ ರಾಮೇಶ್ವರಂ ಕೆಫೆ) ಟೈಮರ್‌ ಇಟ್ಟಿದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಆದರೆ, ಇದರಲ್ಲಿ ಎರಡು ಕಡೆ ಇಟ್ಟಿದ್ದ ಬಾಂಬ್ ನಿಷ್ಕ್ರಿಯವಾಗಿದೆ. ರಾಮೇಶ್ವರಂ ಕೆಫೆ ಬಳಿ ಮಾತ್ರ ಬಾಂಬ್ ಸ್ಫೋಟಿಸಿದೆ ಎಂಬುದನ್ನು ಎನ್‌ಐಎ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಈಗಾಗಲೇ ಎನ್‌ಐಎ ಅಧಿಕಾರಿಗಳು ರಾಮೇಶ್ವರ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಪೂರಕ ದೋಷಾರೋಪಟ್ಟಿ ಸಲ್ಲಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನವೇ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸ್ಪೋಟ ನಡೆಸಲು ಉದ್ದೇಶಿಸಿ, ಬಾಂಬ್‌ ಇರಿಸಿದ್ದರು. ಆದರೆ, ಬಾಂಬ್‌ ಸ್ಫೋಟಗೊಂಡಿರಲಿಲ್ಲ.

ಇನ್ನು ಆರೋಪಿಗಳು ಬೆಂಗಳೂರಿನ ಮೆಜೆಸ್ಟಿಕ್‌, ಯಶವಂತಪುರದಲ್ಲಿ ಬಸ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಬಾಂಬ್‌ ಸ್ಫೋಟಗಳಿಗೆ ಪೂರ್ವಭಾವಿಯಾಗಿ ಶಿವಮೊಗ್ಗದಲ್ಲಿ ಅಭ್ಯಾಸ ನಡೆಸಿದ್ದರು. ಬೈಕ್ಗಳಿಗೆ ಬೆಂಕಿ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದರು ಎಂಬ ಆರೋಪ ಹೊರಿಸಲಾಗಿದೆ.

ಆರೂ ಮಂದಿ ಆರೋಪಿಗಳಿಗೆ ಒಂದೊಂದು ಟಾಸ್ಕ್‌ ನೀಡಲಾಗಿತ್ತು. ಅದರಂತೆ ಆರೋಪಿಗಳು ಕಾರ್ಯೋನ್ಮುಖರಾಗುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರು ಮೂಲಭೂತವಾದಿಗಳಾಗಿದ್ದು, ಐಸಿಸ್ ಸಿದ್ಧಾಂತ ಅಳವಡಿಸಿಕೊಂಡಿದ್ದರು. ಹ್ಯಾಂಡ್ಲರ್ಗಳಿಂದ ಕ್ರಿಪ್ಟೋಕರೆನ್ಸಿ ಮೂಲಕ ಹಣ ಪಡೆಯುತ್ತಿದ್ದರು . ಡಾರ್ಕ್ ವೆಬ್ನಿಂದ ಡೌನ್ಲೋಡ್ ಮಾಡಿದ ವಿವಿಧ ಭಾರತೀಯ ಮತ್ತು ಬಾಂಗ್ಲಾದೇಶಿ ಗುರುತಿನ ದಾಖಲೆಗಳನ್ನು ಬಳಸಿದ್ದರು ಎಂದು ಎನ್‌ಐಎ ತಿಳಿಸಿತ್ತು.

ಕಳೆದ ಮಾರ್ಚ್ 1 ರಂದು ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.

Read More
Next Story