ವಿಜಯೇಂದ್ರ ನಾಯಕತ್ವಕ್ಕೆ ಮತ್ತೆ ರಮೇಶ್ ಜಾರಕಿಹೊಳಿ, ಯತ್ನಾಳ್ ಸವಾಲು
ʼವಿಜಯೇಂದ್ರ ಬಿಜೆಪಿʼ ತಂಡಕ್ಕೆ ಬಹಿಷ್ಕಾರವಿದೆ ಹಾಗೂ ಅವರು ಪಕ್ಷದ ರಾಜ್ಯಾಧ್ಯಕ್ಷ ಆಗಿರುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಉಭಯ ನಾಯಕರು ಘೋಷಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನಮತೀಯ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಕಿಡಿಕಾರಿದ್ದು, ವಿಜಯೇಂದ್ರ ನಾಯಕತ್ವಕ್ಕೆ ಸವಾಲು ಹಾಕಿದ್ದಾರೆ.
ವಿಜಯೇಂದ್ರ ಬಿಜೆಪಿ ತಂಡಕ್ಕೆ ಬಹಿಷ್ಕಾರವಿದೆ ಹಾಗೂ ಅವರು ಪಕ್ಷದ ರಾಜ್ಯಾಧ್ಯಕ್ಷ ಆಗಿರುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಉಭಯ ನಾಯಕರು ಘೋಷಿಸಿದ್ದಾರೆ. ಈ ಮೂಲಕ ಮೂರು ಕ್ಷೇತ್ರಗಳಲ್ಲಿನ ಉಪ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಹಣಾಹಣಿ ನಡೆಸಿದ್ದರೂ, ನಾಯಕರ ನಡುವಿನ ಅಸಮಧಾನ ಈಗಲೂ ಮುಂದುವರೆದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, "ವಿಜಯೇಂದ್ರ ಪಕ್ಷದ ಅಧ್ಯಕ್ಷನಾಗಿರುವವರೆಗೂ ನಾನು ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುವುದಿಲ್ಲ," ಎಂದು ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ʻʻನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಆದರೆ, ವಿಜಯೇಂದ್ರ ಅಧ್ಯಕ್ಷ ಸ್ಥಾನದಲ್ಲಿ ಇರುವವರೆಗೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ," ಎಂದು ಹೇಳಿದ್ದಾರೆ.
"ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲು ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ (ಹಿಂದೆ ಬಿಜೆಪಿಯಲ್ಲಿದ್ದರು) ಕಾರಣ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, " ಯತ್ನಾಳ್ ಹೇಳಿಕೆ ನೂರಕ್ಕೆ ನೂರು ಸತ್ಯ ಇದೆ. ಯೋಗೇಶ್ವರ್ ಹಾಗೂ ನಾನು, ಎನ್ ಆರ್ ಸಂತೋಷ ಮೂರು ಜನ ಮೊದಲ ಸಾಲಿನಲ್ಲಿ ಇದ್ದೆವು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು, ಆರ್ ಶಂಕರ ಮಂತ್ರಿಗಳಾಗಿದ್ದೆವು. ನಾವು ಅಂದು ಮಂತ್ರಿ ಇದ್ದಾಗ ಸಿದ್ದರಾಮಯ್ಯನವರ ಮನೆಗೆ ಹೋಗಿದ್ದೆವು. ಅಂದೇ ಸಂಜೆ ಸರ್ಕಾರ ತೆಗೆಯಬೇಕು ಎಂದು ತೀರ್ಮಾನ ಮಾಡಿದ್ದೆವು. ಅಂದೇ ಈ ಸರ್ಕಾರ ತೆಗೆಯಬೇಕು ಅಂತಾ ನಾನು ಆರ್ ಶಂಕರ್ ನಿರ್ಧರಿಸಿದ್ದೆವು. ಆದರೆ ಈಗ ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಉಪ ಚುನಾವಣೆ ಪಕ್ಷಕ್ಕೆ ಮುಜುಗರ ಆಗೋದು ಬೇಡ," ಎಂದೂ ಅವರು ಹೇಳಿದ್ದಾರೆ. ಆ ಮೂಲಕ ಯಡಿಯೂರಪ್ಪ ಸಿ.ಎಂ. ಆಗಲು ಯೋಗೇಶ್ವರ ಸಹಕಾರಿಯಾಗಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
ಇದು ವಿಜಯೇಂದ್ರನ ತಂಡ: ಯತ್ನಾಳ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರೂ ಬಿ.ವೈ. ವಿಜಯೇಂದ್ರ ಬಗ್ಗೆ ಅಸಮಧಾನ ಹೊರಹಾಕಿದ್ದು, "ಇದು ವಿಜಯೇಂದ್ರನ ತಂಡ. ಇದಕ್ಕೆ ನಮ್ಮ ಬಹಿಷ್ಕಾರ ಇದೆ," ಎಂದು ನೇರವಾಗಿ ಹೇಳಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಗೊಂದಲ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅಹವಾಲು ಸ್ವೀಕರಿಸಲು ಬಿಜೆಪಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಹಾಲಿ ಶಾಸಕನಾಗಿ ನಾನಿದ್ದರೂ, ರಮೇಶ್ ಜಿಗಜಿಣಗಿ ಅವರು ಸಂಸದರಾಗಿದ್ದರೂ, ನಮ್ಮಿಬ್ಬರನ್ನೂ ಹೊರಗಿಟ್ಟು ತಂಡ ರಚಿಸಿದ್ದಾರೆ. ಹಾಗಾಗಿ ವಿಜಯೇಂದ್ರನ ತಂಡಕ್ಕೆ ನಾನು ಬಹಿಷ್ಕಾರ ಹಾಕಿದ್ದೇನೆ. ವಕ್ಫ್ ವಿರುದ್ಧ ಮೊದಲು ಹೋರಾಟ ಪ್ರಾರಂಭಿಸಿದ್ದೇ ನಾನು. ವಿಜಯೇಂದ್ರ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರ ಅಹವಾಲು ಆಲಿಸಲು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕರ ಸೇರಿ ರಚನೆ ಮಾಡಿದೆ. ತಂಡ ಮಂಗಳವಾರ (ಅ.29) ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಹವಾಲು ಆಲಿಸಲಿದೆ. ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಹಾಗೂ ಮುಖಂಡ ಕಲ್ಮರುಡಪ್ಪ ಸೇರಿದಂತೆ ಹಲವು ಶಾಸಕರನ್ನು ತಂಡ ಒಳಗೊಂಡಿದೆ. ಆದರೆ ವಿಜಯಪುರ ನಗರ ಶಾಸಕನಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ತಂಡದಲ್ಲಿ ಸ್ಥಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇದು ವಿಜಯೇಂದ್ರ ಟೀಮ್. ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ. ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.