ರಾಮನ ಹೆಸರಂತೂ ತೆಗೆಯಲಾಗದು, 2028ರೊಳಗೆ ಮತ್ತೆ ರಾಮನಗರವಾಗುತ್ತೆ: ಎಚ್‌ಡಿಕೆ
x

ರಾಮನ ಹೆಸರಂತೂ ತೆಗೆಯಲಾಗದು, 2028ರೊಳಗೆ ಮತ್ತೆ ರಾಮನಗರವಾಗುತ್ತೆ: ಎಚ್‌ಡಿಕೆ


ರಾಮನಗರ ಜಿಲ್ಲೆಗೆ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ. 2028ರೊಳಗೆ ಮತ್ತೆ ರಾಮನಗರ ಎಂದಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ತೀರ್ಮಾನಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ʻʻಸ್ವಲ್ಪ ದಿನ ಅವರು ಖುಷಿಯಾಗಿರಲಿ. ರಾಜಕೀಯ ಪತನ ಆರಂಭವಾಗಿದೆ. ಜಿಲ್ಲೆಯ ಹೆಸರು ಬದಲಿಸಲು ಅರ್ಜಿ ಕೊಟ್ಟವ ಯಾರು? ಹೆಸರು ಬದಲಿಸುವುದರಿಂದ ಏನು ಸಿಗುತ್ತೆ? ಎಂದು ಕಾದು ನೋಡಿ" ಎಂದು ಸವಾಲು ಹಾಕಿದ್ದಾರೆ.

"ರಾಮನಗರ ಇತಿಹಾಸ ಅವರಿಗೆ ಗೊತ್ತಿದೆಯಾ? ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಕಾನೂನು ಸುವ್ಯವಸ್ಥೆ ಹೇಗಿದೆ ನೋಡಬೇಕು? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದರೆ ಏನು ಪ್ರಯೋಜನ ಬಂತು?" ಎಂದು ಕಿಡಿಕಾರಿದ್ದಾರೆ.

ಹೆಸರು ಬದಲಿಸಿದರೆ ಉಪವಾಸ ಸತ್ಯಾಗ್ರಹ ಎಂದಿದ್ದ ಎಚ್‌ಡಿಕೆ

ಈ ಹಿಂದೆ ಕುಮಾರಸ್ವಾಮಿ ಅವರು, ʻʻರಾಮನಗರ ಜಿಲ್ಲೆಯ ಹೆಸರು ಬದಲಾಯಿಸಿದರೆ ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ರಾಮನಗರ ಜೊತೆ ವ್ಯವಹಾರಿಕ ಸಂಬಂಧವಿಲ್ಲ, ಭಾವನಾತ್ಮಕ ಸಂಬಂಧವಿದೆ. ನಾನು ಹುಟ್ಟಿದ್ದು ಹಾಸನ. ಆದರೂ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನನ್ನ ಕೊನೆಯ ಉಸಿರು ಇರುವ ತನಕ ರಾಮನಗರಕ್ಕಾಗಿ ಹೋರಾಟ ಮಾಡುತ್ತೇನೆʼʼ ಎಂದು ಪ್ರತಿಜ್ಞೆ ಮಾಡಿದ್ದರು.

ಹೆಸರು ಬದಲಾವಣೆಯಿಂದ ರಾಜಕೀಯ ಅನುಕೂಲ

ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಹಠ ತೊಟ್ಟಿದ್ದ ಡಿ ಕೆ ಶಿವಕುಮಾರ್ ಅವರು ಇದೀಗ ಯಶಸ್ವಿಯಾಗಿದ್ದಾರೆ. ಈ ಹೆಸರು ಬದಲಾವಣೆಯಿಂದ ಆಗುವ ರಾಜಕೀಯ ಲಾಭ ನಷ್ಟಗಳ ಬಗ್ಗೆಯೂ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ಡಿ ಕೆ ಶಿವಕುಮಾರ್‌ ಅವರ ಈ ಹೆಸರು ಬದಲಾವಣೆಯ ಹಿಂದಿನ ಟಾರ್ಗೆಟ್ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಎಂಬುದು ಗುಟ್ಟಾಗಿ ಉಳಿದಿಲ್ಲ.

ರಾಮನಗರ ಜಿಲ್ಲೆ ಈ ಹಿಂದೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿತ್ತು. ಆದರೆ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ; 2007 ರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಇದ್ದ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ರಚನೆ ಮಾಡಿದ್ದರು. ರಾಮನಗರ ಜಿಲ್ಲೆ ಘೋಷಣೆಗೂ ಮೊದಲು ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ. ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದವು.

1986ರಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ರಚಿಸಲಾಯಿತು. ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಳಿಸಿಕೊಳ್ಳಲಾಯಿತು. ರಾಮನಗರವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ರಚನೆಯಾದಾಗ, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲ್ಲೂಕುಗಳಿದ್ದವು. ಇದೀಗ ಹೊಸದಾಗಿ ಹಾರೋಹಳ್ಳಿ ತಾಲ್ಲೂಕು ರಚನೆಯಾಗಿದೆ.

ಆದರೆ ಇದೀಗ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ಮೂಲಕ ಹೊಸತೊಂದು ರಾಜಕೀಯ ದಾಳವನ್ನು ಡಿ ಕೆ ಶಿವಕುಮಾರ್ ಉರುಳಿಸಿದ್ದಾರೆ.

ಹೆಸರು ಬದಲಾವಣೆಯಿಂದ ಜಿಲ್ಲೆಯ ಜನರಿಗೆ ಅನುಕೂಲ ಮಾಡುವ ಉದ್ದೇಶ ಇದ್ದರೂ ರಾಜಕೀಯವಾಗಿಯೂ ಇದು ಡಿ ಕೆ ಶಿವಕುಮಾರ್‌ ಅವರಿಗೆ ವೈಯಕ್ತಿಕವಾಗಿ ಲಾಭ ತಂದುಕೊಡಲಿದೆ. ಆ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರ ಹಿಂದಿನ ನಿರ್ಧಾರಕ್ಕೆ ಡಿ ಕೆ ಶಿ ಟಕ್ಕರ್ ಕೊಟ್ಟಿದ್ದಾರೆ. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರು ನಾಮಕರಣ ಮಾಡುವುದರಿಂದ ಜನರ ಒಲವು ಗಳಿಸುವುದರಲ್ಲಿ ಸಂಶಯವಿಲ್ಲ. ಇದು ಮುಂದಿನ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭದಾಯಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.

Read More
Next Story