Ramanagara: Dalits are boycotted from participating in the fair, and are not given grocery and work jobs.
x

ಸಾಂದರ್ಭಿಕ ಚಿತ್ರ

ಕನಕಪುರದಲ್ಲಿ ದಲಿತರಿಗೆ ಬಹಿಷ್ಕಾರ: ಮಾರಮ್ಮನ ಜಾತ್ರೆಯಲ್ಲಿ ಸಮಾನ ಅವಕಾಶ ಕೇಳಿದ್ದಕ್ಕೆ ಸವರ್ಣಿಯರ ನಿರ್ಬಂಧ

ಮೊದಲಿನಿಂದಲೂ ದಲಿತರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಆದ್ದರಿಂದ ನೀವು ಪಾಲ್ಗೊಳ್ಳಬಾರದು ಎಂದು ಸವರ್ಣೀಯರು ತಿಳಿಸಿದ್ದಾರೆ. ನಿಮ್ಮ ಹೇಳಿಕೆಯು ಕಾನೂನು ವಿರುದ್ದವಾಗಿದ್ದು ನಾವು ಸಹ ನಿಮ್ಮೊಂದಿಗೆ ಸಾಮರಸ್ಯದಿಂದ ಭಾಗವಹಿಸಲು ಅವಕಾಶ ನೀಡಬೇಕೆಂದು ದಲಿತರು ಮನವಿ ಮಾಡಿದ್ದರು.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಬನವಾಸಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗ್ರಾಮದ ಮಾರಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾನ ಅವಕಾಶ ನೀಡಬೇಕೆಂದು ಕೇಳಿದ ದಲಿತರಿಗೆ, ಸವರ್ಣಿಯರು ಸಾಮಾಜಿಕ ಬಹಿಷ್ಕಾರ ಹಾಕಿರುವುದು ಬೆಳಕಿಗೆ ಬಂದಿದೆ.

ಮಾರಮ್ಮನ ಜಾತ್ರೆ ಆಯೋಜಿಸುವ ಕುರಿತು ಬನವಾಸಿ, ಜುಟ್ಟೆಗೌಡನವಲಸೆ ಹಾಗೂ ವಡೇರಹಳ್ಳಿ ಗ್ರಾಮದ ಮುಖಂಡರು ಇತ್ತೀಚೆಗೆ ಸಭೆ ಸೇರಿದ್ದರು. ಈ ವೇಳೆ, ಗ್ರಾಮದ ಹಬ್ಬದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದು ದಲಿತ ಸಮುದಾಯದವರು ತಿಳಿಸಿದ್ದಾರೆ. ಇದಕ್ಕೆ ಕೆರಳಿದ ಸವರ್ಣಿಯರು, "ಮೊದಲಿನಿಂದಲೂ ದಲಿತರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ, ಆದ್ದರಿಂದ ನೀವು ಭಾಗವಹಿಸಬಾರದು" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ತಮ್ಮ ಹೇಳಿಕೆಯು ಕಾನೂನು ವಿರೋಧಿಯಾಗಿದ್ದು, ಸಾಮರಸ್ಯದಿಂದ ಭಾಗವಹಿಸಲು ಅವಕಾಶ ನೀಡುವಂತೆ ದಲಿತರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದರೂ, ಅದು ಫಲ ನೀಡಿಲ್ಲ.

12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ಸಭೆ ಮುಗಿದ ಬಳಿಕ, ಮೂರು ಗ್ರಾಮಗಳ ಸವರ್ಣೀಯ ಮುಖಂಡರು ಬನವಾಸಿಯ 12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿನ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳನ್ನು ನೀಡಬಾರದು, ಡೇರಿಗಳಲ್ಲಿ ಹಾಲನ್ನು ಹಾಕಿಸಿಕೊಳ್ಳಬಾರದು, ಶುದ್ಧ ಕುಡಿಯುವ ನೀರನ್ನು ಮುಟ್ಟಲು ಬಿಡಬಾರದು ಹಾಗೂ ಕೃಷಿ ಕೆಲಸಗಳಿಗೆ ಕರೆಯಬಾರದು ಎಂದು ನಿರ್ಬಂಧ ವಿಧಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಂಗೂರ ಸಾರಿಸಿದ್ದಾರೆ.

ಅಧಿಕಾರಿಗಳ ಮಧ್ಯಪ್ರವೇಶ

ಈ ವಿಷಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಪೊಲೀಸರು ಗ್ರಾಮಕ್ಕೆ ಆಗಮಿಸಿ, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ರಾಜಧಾನಿಯಿಂದ ಕೂಗಳತೆ ದೂರದಲ್ಲಿರುವ ಕನಕಪುರದಲ್ಲಿ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇತ್ತೀಚೆಗೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕವಣದಾಲ ಗ್ರಾಮದಲ್ಲಿ ಸ್ವಾಮಿನಾಥ್ ಎಂಬ ದಲಿತ ಯುವಕ ದೇವಸ್ಥಾನ ಪ್ರವೇಶಿಸಲು ಸವರ್ಣೀಯರು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಜಾತಿ ಸಂಕೋಲೆಗಳನ್ನು ಕಳಚಿ ಅಸ್ಪೃಶ್ಯತೆಯ ಪಿಡುಗನ್ನು ದೂರ ಮಾಡಬೇಕೆಂದು ಹಲವು ಕಾನೂನುಗಳನ್ನು ತಂದರೂ, ಇಂತಹ ಆಚರಣೆಗಳು ವರದಿಯಾಗುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

Read More
Next Story