ಮುಡಾ ಪಾದಯಾತ್ರೆ | ರಾಮನಗರ ಹಾಳಾಗುತ್ತಿದೆ, ಉತ್ತಮರನ್ನು ಆಯ್ಕೆ ಮಾಡಿ: ಕುಮಾರಸ್ವಾಮಿ ಮನವಿ
x

ಮುಡಾ ಪಾದಯಾತ್ರೆ | ರಾಮನಗರ ಹಾಳಾಗುತ್ತಿದೆ, ಉತ್ತಮರನ್ನು ಆಯ್ಕೆ ಮಾಡಿ: ಕುಮಾರಸ್ವಾಮಿ ಮನವಿ


ರಾಮನಗರ ಕ್ಷೇತ್ರ ಹಾಳಾಗುತ್ತಿದೆ. ನಮ್ಮನ್ನೇ ಆಯ್ಕೆ ಮಾಡಿ ಎಂದು ನಾನು ಹೇಳುತ್ತಿಲ್ಲ. ಯಾರಾದರೂ, ಉತ್ತಮರನ್ನು ಆಯ್ಕೆ ಮಾಡಿ ಎಂದು ಮುಸ್ಲಿಂ ಸಮುದಾಯಕ್ಕೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ʻʻನೀವು ಎಷ್ಟು ದಿನ ಹೀಗೆ ಮಾಡುತ್ತೀರಿ ಎಂದು ನೋಡುತ್ತೇನೆ. ನೀವು ಆರಿಸಿ ಕಳಿಸಿದ ಮನೆ ಮಗ ಕುಮಾರಸ್ವಾಮಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ನೀವು ನಂಬಿ ಮತ ಹಾಕಿದ ವ್ಯಕ್ತಿ (ಇಕ್ಬಾಲ್ ಅನ್ಸಾರಿ), ಅವರ ಪಕ್ಷ ರಾಮನಗರದಲ್ಲಿ ಏನೆಲ್ಲಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಊರೂ ಊರಿಗೆ ಬೆಂಕಿ ಹಾಕಿದ್ದರು. ಅವತ್ತು ನಾನು ದೇವೇಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಈಗ ಮತ್ತೆ ಬಂದು ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆʼʼ ಎಂದು ಕಿಡಿಕಾರಿದರು.

ʻʻ1995ರಲ್ಲಿ ರಾಮನಗರ ಕ್ಷೇತ್ರದಲ್ಲಿ ಓಡಾಡಲು ಆಗುತ್ತಿತ್ತಾ? ಈಗ ಒಬ್ಬ ವ್ಯಕ್ತಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಏನು ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಬಲ್ಲೆ. ಮತ್ತಿಕೆರೆ ಹೋಗಿ ನೋಡಿ, ಕಲ್ಲುಗಳು ಎದ್ದು ಹೊರಗೆ ಬಂದಿವೆʼʼ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಕುಮಾರಸ್ವಾಮಿ ಗುಡುಗಿದರು.

ʻʻರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್- ಬಿಜೆಪಿ ಅಶ್ವಮೇಧಯ ಯಾಗ ಆರಂಭಿಸಿವೆ. ಈ ಸರ್ಕಾರದ ಅಂತಿಮ ಕಾಲ ಹತ್ತಿರಲ್ಲಿಯೇ ಇದೆ. ಈ ಸರ್ಕಾರ ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿದೆ. ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನಿನ ಬಗ್ಗೆ ಮಾತನಾಡಿದ ಅವರು, ʻʻನಾನು ಚಲನಚಿತ್ರ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಚೈನಾ ಸಾಬ್ರು ಎನ್ನುವವರು ಒಬ್ಬರು ಇದ್ದರು. ನೀನು ದೇವೇಗೌಡರ ಮಗ, ಬೇಸಾಯ ಮಾಡಬೇಕು. ನೀನು ರೈತನಾಗಿ ಬಾಳಿ ಬದುಕಬೇಕು ಎಂದು ಹೇಳಿ ಕರೆದುಕೊಂಡು ಹೋಗಿ ಈ ಜಾಮೀನು ತೋರಿಸಿದರು. ಆ ಜಾಗ ನೋಡಿದ ನಾನು, ಇದೇನು ಕಲ್ಲು ಒಡೆಯುವ ಜಾಗ ತೋರಿಸುತ್ತಿದ್ದೀರಲಾ ಎಂದೆ.. ಆಮೇಲೆ ಕಷ್ಟಪಟ್ಟು ಒಳ್ಳೆಯ ತೋಟ ಮಾಡಿದ್ದೇನೆ. ಯಾರು ಬೇಕಾದರೂ ಬಂದು ನೋಡಬಹುದು. ನನಗೆ ಆ ಜಾಮೀನು ಮಾರಿದವರನ್ನು, ಕೊಟ್ಟವರನ್ನು ಯಾರನ್ನು ಮರೆತಿಲ್ಲ, ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲʼʼ ಎಂದರು.

ʻʻಬೆಂಗಳೂರು ದಕ್ಷಿಣ ಎಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಮನಗರ ಹೆಸರು ಕಿತ್ತು ಹಾಕಿದಾಕ್ಷಣ ಭೂಮಿ ಬೆಲೆ ಜಾಸ್ತಿ ಆಗುತ್ತದೆಯೇ? ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಏನೆಲ್ಲಾ ಮಾಡುತ್ತೀದ್ದೀರಿ ಎನ್ನುವುದು ನನಗೆ ಗೊತ್ತಿದೆ. ಕನಕಪುರದಲ್ಲಿ ನೀವು ಲೋಕಸಭೆ ಚುನಾವಣೆಯಲ್ಲಿ ಎಷ್ಟು ಮತ ಪಡೆದಿರಿ. ಅಷ್ಟು ಮತ‌ ಪಡೆಯೋಕೆ ನೀವು ಜನರಿಗೆ ಎಷ್ಟು ಹಿಂಸೆ ಕೊಟ್ಟಿದ್ದೀರಿ? ಎಲ್ಲರಿಗೂ ಗೊತ್ತಿದೆʼʼ ಎಂದು ವಾಗ್ದಾಳಿ ನಡೆಸಿದರು.

ʻʻಅವರು ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಲಬುರ್ಗಿಯಲ್ಲಿ ಒಬ್ಬ ಪೋಲಿಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದಿರಲ್ಲ.. ನಿಮ್ಮ ಪ್ರಾಮಾಣಿಕತೆ ಎಂದರೆ ಇದೇನಾ?ʼʼ ಎಂದು ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

Read More
Next Story