
ಕರ್ನಾಟಕ ಲೋಕಾಯುಕ್ತ
1 ಲಕ್ಷ ರೂ. ಲಂಚ ಸ್ವೀಕಾರ: ರಾಮಮೂರ್ತಿನಗರ ಠಾಣೆಯ ಇನ್ಸ್ಪೆಕ್ಟರ್, ಪಿಎಸ್ಐ ಲೋಕಾಯುಕ್ತ ಬಲೆಗೆ
ಕೃಷ್ಣರಾಜಪುರದ ನಿವಾಸಿ ಗೋಪಿನಾಥ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳನ್ನು ದಾಖಲಿಸಲಾಗಿದೆ.
ವಂಚನೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಲು 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ (ಪಿಐ), ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಮತ್ತು ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಲೆಗೆ ಕೆಡವಿದ್ದಾರೆ.
ಕೃಷ್ಣರಾಜಪುರದ ನಿವಾಸಿ ಗೋಪಿನಾಥ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಗೋಪಿನಾಥ್ ಅವರ ಪತ್ನಿ, ಕುಟುಂಬಕ್ಕೆ ಸೇರಿದ ಚಿನ್ನಾಭರಣ ಮತ್ತು ನಗದನ್ನು ಅವರಿಗೆ ತಿಳಿಸದೆಯೇ ಬೇರೆಯವರಿಗೆ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ತಮ್ಮ ಚಿನ್ನಾಭರಣವನ್ನು ವಾಪಸ್ ಕೊಡಿಸುವಂತೆ ಕೋರಿ ಗೋಪಿನಾಥ್ ಅವರು ರಾಮಮೂರ್ತಿನಗರ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಅನ್ವಯ ಪ್ರಕರಣ ದಾಖಲಿಸಲು ಮತ್ತು ಕಳೆದುಹೋದ ಚಿನ್ನಾಭರಣವನ್ನು ವಾಪಸ್ ಕೊಡಿಸಲು ಠಾಣೆಯ ಇನ್ಸ್ಪೆಕ್ಟರ್ ರಾಜಶೇಖರ್ ಅವರು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಂಜುನಾಥ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ದೂರುದಾರರು ರಾಮಮೂರ್ತಿನಗರ ಠಾಣೆಯ ಪಿಎಸ್ಐ ರುಮಾನ್ ಪಾಷಾ ಮತ್ತು ಅವರ ಆಪ್ತ ಎನ್ನಲಾದ ಇಮ್ರಾನ್ ಬಾಬು ಎಂಬುವವರಿಗೆ 1 ಲಕ್ಷ ರೂಪಾಯಿ ಲಂಚದ ಹಣವನ್ನು ನೀಡುವಾಗ ದಾಳಿ ನಡೆಸಿದರು. ಈ ವೇಳೆ ಇಬ್ಬರನ್ನೂ ರೆಡ್-ಹ್ಯಾಂಡ್ ಆಗಿ ಬಂಧಿಸಲಾಯಿತು.
ಬಂಧಿತ ಆರೋಪಿಗಳು ನೀಡಿದ ಮಾಹಿತಿಯನ್ನು ಆಧರಿಸಿ, ಪ್ರಕರಣದ ಪ್ರಮುಖ ಆರೋಪಿ ಇನ್ಸ್ಪೆಕ್ಟರ್ ರಾಜಶೇಖರ್ ಅವರನ್ನೂ ಸಹ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.