ಮೆಟ್ರೋ ಯೋಜನೆಗೆ ಕೇಂದ್ರದ್ದೇ ಸಂಪೂರ್ಣ ಹಣ ಎಂಬುದು ಸುಳ್ಳು:  ರಾಮಲಿಂಗಾ ರೆಡ್ಡಿ ವಾಗ್ದಾಳಿ
x

ರಾಮಲಿಂಗ ರೆಡ್ಡಿ

ಮೆಟ್ರೋ ಯೋಜನೆಗೆ ಕೇಂದ್ರದ್ದೇ ಸಂಪೂರ್ಣ ಹಣ ಎಂಬುದು ಸುಳ್ಳು: ರಾಮಲಿಂಗಾ ರೆಡ್ಡಿ ವಾಗ್ದಾಳಿ

ಬಿಜೆಪಿ ನಾಯಕರಿಗೆ ಇತಿಹಾಸದ ಸರಿಯಾದ ಮಾಹಿತಿ ಇಲ್ಲ. ಅವರು ಏನೂ ಮಾಡದೇ ಇದ್ದರೂ, ಎಲ್ಲಾ ಕ್ರೆಡಿಟ್‌ಗಳನ್ನು ತಾವೇ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


"ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ನೀಡಿದೆ" ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ನಾಯಕರಿಗೆ ಇತಿಹಾಸದ ಸರಿಯಾದ ಅರಿವಿಲ್ಲ, ಏನೂ ಮಾಡದಿದ್ದರೂ ಎಲ್ಲಾ ಕ್ರೆಡಿಟ್ ಪಡೆಯಲು ಯತ್ನಿಸುತ್ತಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಮತ್ತು ಶ್ರಮವನ್ನು ಅಂಕಿಅಂಶಗಳ ಸಮೇತ ವಿವರಿಸಿದರು. "ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವು ಶೇ.30ರಷ್ಟು ಹಣ ನೀಡುವುದಲ್ಲದೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನೂ ಒದಗಿಸಿದೆ. ಆದರೆ ಕೇಂದ್ರ ಸರ್ಕಾರ ನೀಡಿರುವುದು ಕೇವಲ ಶೇ.20ರಷ್ಟು ಹಣ ಮಾತ್ರ. ಉಳಿದ ಹಣವನ್ನು ಮೆಟ್ರೋ ನಿಗಮವು ಸಾಲದ ಮೂಲಕ ಪಡೆದಿದೆ. ಆ ಸಾಲವನ್ನು ತೀರಿಸಬೇಕಾದ ಜವಾಬ್ದಾರಿ ಇರುವುದು ರಾಜ್ಯ ಸರ್ಕಾರದ ಮೇಲೆ, ಕೇಂದ್ರದ ಮೇಲಲ್ಲ. ಹೀಗಿರುವಾಗ, ₹16,000 ಕೋಟಿ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಬಿಜೆಪಿಯವರು ಕೇವಲ ಬಾವುಟ ಹಾರಿಸಲು ಬರುತ್ತಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವೇ ನೇರ ಹೊಣೆ

ಮೆಟ್ರೋದ ಹಳದಿ ಮಾರ್ಗ ಸೇರಿದಂತೆ ಯೋಜನೆಗಳು ತಡವಾಗಲು ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಸಚಿವರು, "ಮೆಟ್ರೋ ಬೋಗಿಗಳು ಬರುವುದು ತಡವಾಗಿದ್ದಕ್ಕೆ ಮತ್ತು ಯೋಜನೆಗೆ ಅಗತ್ಯವಾದ ಅನುಮತಿಗಳು ಸಿಗದಿರುವುದಕ್ಕೆ ಕೇಂದ್ರವೇ ಕಾರಣ. ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಅವರ ಅವಧಿಯಲ್ಲೇ ಯೋಜನೆಗಳು ಯಾಕೆ ವಿಳಂಬವಾದವು?" ಎಂದು ಪ್ರಶ್ನಿಸಿದರು.

ನಾಳೆ (ಭಾನುವಾರ) ನಡೆಯಲಿರುವ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಶಿಷ್ಟಾಚಾರದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಮಗೂ ಆಹ್ವಾನ ಬಂದಿದೆ ಎಂದು ತಿಳಿಸಿದರು. "ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಆಹ್ವಾನ ನೀಡಲಾಗಿದೆಯೇ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ, ಆದರೆ ಶಿಷ್ಟಾಚಾರದ ಪ್ರಕಾರ ಅವರಿಗೂ ಆಹ್ವಾನ ಇರುವುದು ಸಹಜ," ಎಂದು ಅವರು ನಗುತ್ತಲೇ ಪ್ರತಿಕ್ರಿಯಿಸಿದರು.

Read More
Next Story