
ʼಸ್ವರʼ ನಿಲ್ಲಿಸಿದ ವೀಣೆ ತಯಾರಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ
ತಮಿಳುನಾಡಿನ ತಂಜಾವೂರಿನಲ್ಲಿ ಉತ್ತಮ ದರ್ಜೆಯ ವೀಣೆಗಳು ತಯಾರಾಗುತ್ತವೆ. ಅದೇ ರೀತಿಯ ವೀಣೆಗಳನ್ನು ಬೆಂಗಳೂರು ಸಮೀಪದ ಸಿಂಪಾಡಿಪುರ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಪೆನ್ನ ಓಬಳಯ್ಯ ಸಿದ್ಧಹಸ್ತರು.
ವೀಣೆ ತಯಾರಿಕೆಗೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಿಂಪಾಡಿಪುರದಲ್ಲಿ ಮೂರು ದಿನಗಳ ಹಿಂದಷ್ಟೇ ಸಂಭ್ರಮ ಹಿಮ್ಮಡಿಸಿತ್ತು. ತಮ್ಮೂರಿನ ಶತಾಯುಷಿ, ವೀಣೆ ತಯಾರಕ ಪೆನ್ನ ಓಬಳಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಸುದ್ದಿ ತಿಳಿದು ಊರಿಗೆ ಊರೇ ಸಂಭ್ರಮಿಸಿತ್ತು. ಆದರೆ, ಅದೇ ಸಂಭ್ರಮ, ಸೂತಕದ ಕಳೆ ತಂದಿದೆ. ಶತಾಯುಷಿ ಪೆನ್ನ ಓಬಳಯ್ಯ ಅವರು ಭಾನುವಾರ ರಾತ್ರಿ ನಿಧನರಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಬದುಕಿಗೆ ವಿದಾಯ ಹೇಳಿದ್ದಾರೆ.
ಸಾಮಾನ್ಯವಾಗಿ ಉತ್ತಮ ದರ್ಜೆಯ ವೀಣೆಗಳು ತಮಿಳುನಾಡಿನ ತಾಂಜಾವೂರಿನಲ್ಲಿ ತಯಾರಾಗುತ್ತವೆ. ಸಾಂಪ್ರದಾಯಿಕ ವೀಣೆಗಳು ಮಾತ್ರ ಸಿಂಪಾಡಿಪುರದಲ್ಲೇ ತಯಾರಾಗುತ್ತವೆ. ಇಂತಹ ವೀಣೆಗಳನ್ನು ತಯಾರಿಸುವುದರಲ್ಲಿ ಪೆನ್ನ ಓಬಳಯ್ಯ ಸಿದ್ಧಹಸ್ತರಾಗಿದ್ದರು.
ಕಳೆದ ಐವತ್ತು ವರ್ಷದಿಂದ ವೀಣೆ ತಯಾರಿಸಿ, ಗ್ರಾಮದ ಯುವಕರಿಗೂ ಜ್ಞಾನ ಧಾರೆಯೆರೆದಿದ್ದ ಪೆನ್ನ ಓಬಳಯ್ಯ(105) ಅವರ ನಿಧನ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಯಂತ್ರಗಳ ಬಳಕೆ ಇಲ್ಲ
ಸಿಂಪಾಡಿಪುರದಲ್ಲಿ ತಯಾರಾಗುವ ವೀಣೆಗಳಿಗೆ ಯಾವುದೇ ಹಂತದಲ್ಲೂ ಯಂತ್ರಗಳನ್ನು ಬಳಕೆ ಮಾಡುವುದಿಲ್ಲ. 'ಕೊಡ' (ವೀಣೆಯ ಮುಖ್ಯ ಬುರುಡೆ) ಕೆತ್ತುವುದರಿಂದ ಹಿಡಿದು ಚಿತ್ತಾರ ಬಿಡಿಸುವವರೆಗೆ ಎಲ್ಲ ಕೆಲಸಗಳನ್ನು ಕರ ಕುಶಲಕರ್ಮಿಗಳು ಮಾಡುತ್ತಾರೆ. ವೀಣೆ ತಯಾರಿಕೆಗೆ ಸಾಮಾನ್ಯವಾಗಿ ಹಲಸಿನ ಮರ ಬಳಸಲಾಗುತ್ತದೆ. ಏಕೆಂದರೆ ಇದು ಉತ್ತಮ ನಾದ ಹೊರ ಹೊಮ್ಮಿಸುತ್ತದೆ. ಇಲ್ಲಿ ಸಾಂಪ್ರದಾಯಿಕವಾದ ಒಂದು ವೀಣೆ ತಯಾರಿಸಲು 10 ರಿಂದ 15 ದಿನಗಳು ಬೇಕಾಗುತ್ತದೆ.
ಪೆನ್ನ ಓಬಳಯ್ಯ ಅವರು ಪೂರ್ವಜರಿಂದ ಕಲಿತ ವಿದ್ಯೆಯನ್ನು ಗ್ರಾಮದ ಯುವಕರಿಗೂ ಹೇಳಿಕೊಟ್ಟು ಜೀವನಕ್ಕೆ ಹಾದಿ ಮಾಡಿಕೊಟ್ಟಿದ್ದರು.
ವೀಣೆ ತಯಾರಿಕೆಯಲ್ಲಿ ಅರ್ಧ ದಶಕದ ಹಾದಿ
ಸುಮಾರು ಐವತ್ತು ವರ್ಷಗಳ ಹಿಂದೆ ಪೆನ್ನ ಓಬಳಯ್ಯ ಅವರು ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆಯ ಕಸುಬು ಪ್ರಾರಂಭಿಸಿದರು. ಇವರು ಮೈಸೂರು ವೀಣೆ ತಯಾರಿಸುವುದರಲ್ಲಿ ಪರಿಣಿತರು. ತನ್ನ ನಂತರವೂ ಈ ಕರಕುಶಲತೆ ಮುಂದುವರೆಯಬೇಕು ಎಂಬ ಸದುದ್ದೇಶದಿಂದ ಪೆನ್ನ ಓಬಳಯ್ಯ ಅವರು ಗ್ರಾಮದ ಹಲವು ಮಂದಿಗೂ ಈ ಕಲೆ ಕಲಿಸಿದರು.
ಗ್ರಾಮದ ಸುಮಾರು ಕುಟುಂಬಗಳು ವಂಶಪಾರಂಪರ್ಯವಾಗಿ ವೀಣೆ ಮತ್ತು ತಂಬೂರಿ ತಯಾರಿಕೆಯಲ್ಲಿ ತೊಡಗಿವೆ. ಇವರಲ್ಲಿ ಹೆಚ್ಚಿನವರು ದಲಿತ ಸಮುದಾಯಕ್ಕೆ ಸೇರಿದವರು. ವಿಪರ್ಯಾಸವೆಂದರೆ ವೀಣೆ ತಯಾರಿಸುವ ಬಹುತೇಕ ಕಲಾವಿದರಿಗೆ ಅದನ್ನು ನುಡಿಸಲು ಬರುವುದಿಲ್ಲ.
ವೀಣೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು
ಮಾರಾಟ ಕೇಂದ್ರಗಳಲ್ಲಿ ಅಂತಿಮ ರೂಪ
ಸಿಂಪಾಡಿಪುರದಲ್ಲಿ ಕೇವಲ ವೀಣೆ ಆಕಾರವನ್ನು ಕೆತ್ತಲಾಗುತ್ತದೆ. ವೀಣೆಗೆ ತಂತಿ ಜೋಡಣೆ ಮತ್ತು ಅಂತಿಮ ರೂಪ ನೀಡುವ ಕೆಲಸವನ್ನು ಬೆಂಗಳೂರಿನ ಸಂಗೀತ ಪರಿಕರಗಳ ಮಾರಾಟ ಕೇಂದ್ರಗಳಲ್ಲಿ ತಜ್ಞರು ಮಾಡುತ್ತಾರೆ.
ಬೆಂಗಳೂರಿನ 'ಶಿವ ಮ್ಯೂಸಿಕಲ್ಸ್' ಸಹಯೋಗದೊಂದಿಗೆ ಸಿಂಪಾಡಿಪುರದ ಕುಶಲಕರ್ಮಿಗಳಾದ ಉಮೇಶ್ ಮತ್ತು ನರಸಿಂಹಯ್ಯ ಅವರು ವಿಶ್ವದ ಅತಿ ದೊಡ್ಡ ವೀಣೆ ತಯಾರಿಸಿದ್ದರು. ಇದನ್ನು ಶೃಂಗೇರಿ ದೇವಸ್ಥಾನಕ್ಕೆ ನೀಡಲಾಗಿದೆ.
ಪ್ರಸ್ತುತ ಸವಾಲುಗಳು
ಎಲೆಕ್ಟ್ರಾನಿಕ್ ಶೃತಿ ಪೆಟ್ಟಿಗೆಗಳ ಬಳಕೆಯಿಂದಾಗಿ ವೀಣೆ ಹಾಗೂ ತಂಬೂರಿಗಳಿಗೆ ಬೇಡಿಕೆ ಕುಸಿದಿದೆ. ವೀಣೆ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬೇಡಿಕೆ ಕುಸಿಯುತ್ತಿದೆ. ವೀಣೆ ತಯಾರಿಕೆ ಈ ಗ್ರಾಮದ ಪ್ರಮುಖ ಕಸುಬಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕುಸಿಯುತ್ತಿದೆ. ಸರ್ಕಾರದಿಂದ ಸೂಕ್ತ ನೆರವು ಸಿಗದೇ ಕಸುಬುದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವರು ತಮ್ಮ ವೃತ್ತಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ವೀಣೆ ತಯಾರಕರ ಸಂಖ್ಯೆ ಶೇ 40ಕ್ಕೆ ಕುಸಿತ
ಒಂದು ವೀಣೆಯ ಮಾರುಕಟ್ಟೆ ಬೆಲೆ 40-70 ಸಾವಿರ ಇದ್ದರೂ ತಯಾರಕರಿಗೆ ಅದರ ಮೂರನೇ ಒಂದು ಭಾಗದಷ್ಟು ಮಾತ್ರ ದೊರೆಯುತ್ತದೆ. ಇದರಿಂದಾಗಿ ವೀಣೆ ತಯಾರಕರ ಜೀವನ ನಿರ್ವಹಣೆ ಕಷ್ಟವಾಗಿ ಕೂಲಿ ಕೆಲಸ ಅರಸಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ.
ಒಂದು ಕಾಲದಲ್ಲಿ ಶೇ. 90 ರಷ್ಟಿದ್ದ ವೀಣೆ ತಯಾರಕರ ಸಂಖ್ಯೆ ಇದೀಗ ಶೇ.40 ಕ್ಕೆ ಕುಸಿದಿದೆ. ಯುವ ಪೀಳಿಗೆಯು ಈ ಕರಕುಶಲ ಕಲೆ ಮುಂದುವರಿಸಲು ಆಸಕ್ತಿ ತೋರಿಸುತ್ತಿಲ್ಲ.
ಪೆನ್ನ ಓಬಳಯ್ಯ ನಿಧನಕ್ಕೆ ಸಿಎಂ ಸಂತಾಪ
ಇತ್ತೀಚೆಗಷ್ಟೇ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ಅವರು, "ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿಪುರದ ನಿವಾಸಿಯಾಗಿದ್ದ ಓಬಳಯ್ಯ ಅವರು ಇಡೀ ದೇಶಕ್ಕೆ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದವರು. ಜೊತೆಗೆ ಆಸಕ್ತರಿಗೆ ವೀಣೆ ತಯಾರಿಕೆಯ ಕೌಶಲ್ಯವನ್ನು ಕಲಿಸಿ, ಸಾಂಪ್ರದಾಯಿಕ ಸಾಹಿತ್ಯದ ನಿರಂತರತೆಯನ್ನು ಕಾಪಾಡುವಲ್ಲಿ ಶ್ರಮಿಸಿದ್ದರು. ಹಿರಿಯ ಜೀವ ಓಬಳಯ್ಯನವರ ಅಗಲಿಕೆಯಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದ್ದಾರೆ.
ನವೆಂಬರ್ 1ರಂದು ಸಿಎಂ ಸಿದ್ದರಾಮಯ್ಯ ಪೆನ್ನ ಓಬಳಯ್ಯನವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.

