
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಮರ್ಶಕ ರಹಮತ್ ತರೀಕೆರೆ
ಜೋಪಡಿ ಬೆಳಕಲ್ಲಿ ಓದಿ, ಹಮಾಲಿಯಾಗಿ ದುಡಿದಿದ್ದ ರಹಮತ್ ತರೀಕೆರೆಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
1982-84ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿದ ರಹಮತ್ ತರೀಕೆರೆಯವರು 1992ರಿಂದ ಚಂದ್ರಶೇಖರ ಕಂಬಾರರ ಕರೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.
ಜೋಪಡಿ ಬೆಳಕಿನಲ್ಲಿ ಓದಿ, ಹಮಾಲಿ ಕೆಲಸ ಮಾಡಿದ್ದ ವಿಮರ್ಶಕ ರಹಮತ್ ತರೀಕೆರೆ ಅವರಿಗೆ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕಡುಬಡತನದಲ್ಲಿ ಬೆಳೆದು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಬಾಲ್ಯ ಜೀವನ
ಕನ್ನಡದ ಚಿಂತಕ ಹಾಗೂ ವಿಮರ್ಶಕ ರಹಮತ್ ತರೀಕೆರೆ ಅವರು 1959ರಂದು ಆ.26ರಂದು ತರೀಕೆರೆ ತಾಲೂಕಿನ ಸಮತಳದಲ್ಲಿ ಜನಿಸಿದರು. ಹಳ್ಳಿಯಲ್ಲಿ ಕಮ್ಮಾರಿಕೆಯಿಂದ ಮನೆಯವರ ಹೊಟ್ಟೆ ತುಂಬದಿದ್ದಾಗ ಇಡೀ ಕುಟುಂಬ ತರೀಕೆರೆಗೆ ಸ್ಥಳಾಂತರವಾಯಿತು. ಕೊಳೆಗೇರಿಯ ಜೋಪಡಿಯಲ್ಲಿ ಬೆಳೆದ ರಹಮತ್ ಅವರು, ದೀಪದ ಬೆಳಕಿನಲ್ಲಿ ಓದುತ್ತಾ ಎಸ್‌ಎಸ್‌ಎಲ್‌ಸಿ, ಪಿಯುಸಿ ಪೂರ್ಣಗೊಳಿಸಿದರು. ಇದಕ್ಕೆ ತಾಯಿಯ ಒತ್ತಾಸೆಯೂ ಇತ್ತು. ತರೀಕೆರೆಯಲ್ಲಿ ಓದುವಾಗ ಅಪ್ಪ, ಅಣ್ಣಂದಿರೊಂದಿಗೆ ಹಮಾಲಿ ದುಡಿದದ್ದು ಉಂಟು.
ಪದವಿ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡದ ವಿಷಯ ಆಯ್ಕೆ ಮಾಡಿಕೊಂಡು ಪ್ರಥಮ ಸ್ಥಾನ ಮತ್ತು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ ರಹಮತ್ ತರೀಕೆರೆ ಅವರು, ಮುಂದೆ ಮೈಸೂರಿನ ಮಾನಸಗಂಗೋತ್ರಿಯಲ್ಲಿ 1983ರಲ್ಲಿ ಏಳು ಸ್ವರ್ಣಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ಪ್ರೊ. ಎಚ್.ಎಂ.ಚನ್ನಯ್ಯನವರ ಮಾರ್ಗದರ್ಶನದಲ್ಲಿ 1988ರಲ್ಲಿ ಪಿಎಚ್‌ಡಿ ಪದವಿ ಪಡೆದರು.
ಹಂಪಿ ವಿವಿಯಲ್ಲಿ ಪ್ರಾಧ್ಯಾಪಕ ವೃತ್ತಿ
1982-84ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿದ ರಹಮತ್ ತರೀಕೆರೆಯವರು, 1992ರಿಂದ ಚಂದ್ರಶೇಖರ ಕಂಬಾರರ ಕರೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಭಾಷಾ ನಿಕಾಯದ ಡೀನ್ ಆಗಿ ಸೇವೆ ಸಲ್ಲಿಸಿದರು. ಈಗ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಹಮತ್ ತರೀಕೆರೆಯವರು ತಮ್ಮ ಓದಿನ ದಿನಗಳಲ್ಲೇ ‘ಪ್ರಪಂಚ’, ‘ಜನಪ್ರಗತಿ’, ‘ಅಂಚೆವಾರ್ತೆ’ಗಳಂಥ ಪತ್ರಿಕೆಗಳಲ್ಲಿ ಹೃದಯಸ್ಪರ್ಶಿ ಕಥೆ ಕವಿತೆಗಳನ್ನು ಪ್ರಕಟಿಸಿ ತರೀಕೆರೆ ಸೀಮೆಯ ಜನರ ಹೆಮ್ಮೆಗೆ ಪಾತ್ರರಾಗಿದ್ದರು. ಅವರು ಆಗಲೇ ‘ಐವರು ಹೇಳಿದ ಜನಪದ ಕಥೆಗಳು’ ಎಂಬ ಸಂಪಾದನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುವಷ್ಟು ಬೆಳೆದಿದ್ದರು.
ವಿದ್ಯಾರ್ಥಿ ಬದುಕಿನ ಜೀವನದುದ್ದಕ್ಕೂ ವಿದ್ಯಾಗುರುಗಳಾದ ಗೋವಿಂದರಾಜು, ಹಾಲೇಶ್, ನೊಸಂತಿ, ಎಚ್. ಎಂ. ಚೆನ್ನಯ್ಯ, ಪ್ರಭುಶಂಕರ, ಜಿ.ಎಚ್. ನಾಯಕ ಮೊದಲಾದವರು ನೀಡಿದ ನೈತಿಕ ಬೆಂಬಲ ಅವರನ್ನು ಬೆಳೆಸಿತು.
'ರಹಮತ್ ತರೀಕೆರೆಯವರ' ಕೆಲವು ಪ್ರಮುಖ ಕೃತಿಗಳು
ಪ್ರತಿಸಂಸ್ಕೃತಿ (ವಿಮರ್ಶಾ ಸಂಕಲನ), 'ಕರ್ನಾಟಕ ಸೂಫಿಗಳು' (ಸಂಶೋಧನೆ), ಅಂಡಮಾನ್ ಕನಸು, ಕರ್ನಾಟಕದ ನಾಥಪಂಥ (ಸಂಶೋಧನೆ), ಧಮಪರೀಕ್ಷೆ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

