ರಾಜ್ಯಸಭಾ ಚುನಾವಣೆ | ರಾಜ್ಯದಿಂದ ಮಾಕೆನ್‌ ಸೇರಿ ಮೂವರಿಗೆ ಕಾಂಗ್ರೆಸ್‌ ಟಿಕೆಟ್
x

ರಾಜ್ಯಸಭಾ ಚುನಾವಣೆ | ರಾಜ್ಯದಿಂದ ಮಾಕೆನ್‌ ಸೇರಿ ಮೂವರಿಗೆ ಕಾಂಗ್ರೆಸ್‌ ಟಿಕೆಟ್


ಕಾಂಗ್ರೆಸ್ ಪಕ್ಷ ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಯಲಿರುವ ಮೂವರ ಪಟ್ಟಿಯನ್ನು ಪ್ರಕಟಿಸಿದ್ದು, ಆ ಮೂಲಕ ರಾಜ್ಯಸಭಾ ಚುನಾವಣಾ ಟಿಕೆಟ್ ವಿಷಯದಲ್ಲಿ ಇದ್ದ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.

ಬಿಜೆಪಿ ಮೂರು ದಿನಗಳ ಹಿಂದೆಯೇ ನಾರಾಯಣ ಸಾ ಬಾಂಡಗೆ ಅವರಿಗೆ ಟಿಕೆಟ್ ಘೋಷಿಸಿ, ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿತ್ತು. ಇದೀಗ ಕಾಂಗ್ರೆಸ್ ಕೂಡ ಬುಧವಾರ ತನ್ನ ಮೂವರು ಅಭ್ಯರ್ಥಿಗಳನ್ನು ಘೋಷಿಸಿದೆ.

ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಡಾ ಸೈಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ಅವರಿಗೆ ಮತ್ತೊಂದು ಅವಕಾಶ ನೀಡಿರುವ ಕಾಂಗ್ರೆಸ್, ಮೂರನೇ ಅಭ್ಯರ್ಥಿಯಾಗಿ ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಹಾಗಾಗಿ, ಮತ್ತೊಂದು ಅವಧಿಗೆ ಆಯ್ಕೆ ಬಯಸಿದ್ದ ಹಾಲಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ಕೈತಪ್ಪಿದೆ.

ದೇಶದ ೧೫ ರಾಜ್ಯಗಳ ಒಟ್ಟು ೫೬ ರಾಜ್ಯಸಭಾ ಸ್ಥಾನಗಳಿಗೆ ಫೆ.೨೭ರಂದು ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳವಾರ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ ರಾಜಸ್ಥಾನದಿಂದ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕಣಕ್ಕಿಳಿಯುವುದಾಗಿ ಘೋಷಿಸಲಾಗಿತ್ತು. ಅದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಬುಧವಾರ ಜೈಪುರಕ್ಕೆ ತೆರಳಿ ರಾಜ್ಯಸಭಾ ಚುನಾವಣಾ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಕರ್ನಾಟಕದಿಂದ ಎಐಸಿಸಿ ನಾಯಕ ಅಭಿಷೇಕ್ ಮನು ಸಿಂಘ್ವಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರನ್ನು ಹಿಮಾಚಲ ಪ್ರದೇಶದಿಂದ ಕಣಕ್ಕಿಳಿಸಲಾಗಿದೆ. ಹಾಗೇ ಆರ್ ಬಿ ಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸುವ ಇರಾದೆ ಕಾಂಗ್ರೆಸ್ ಹೈಕಮಾಂಡ್ ಗೆ ಇದೆ ಎಂದೂ ಹೇಳಲಾಗಿತ್ತು. ಆದರೆ, ಇದೀಗ ವಿಧಾನಸಭಾ ಸಂಖ್ಯಾಬಲದ ಮೇಲೆ ಸುಲಭವಾಗಿ ಗೆಲ್ಲಬಹುದಾದ ಮೂರೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ರಘುರಾಂ ರಾಜನ್ ಹೆಸರು ಪಟ್ಟಿಯಲ್ಲಿ ಇಲ್ಲ.

ಮಧ್ಯಪ್ರದೇಶದಿಂದ ಅಶೋಕ್ ಸಿಂಗ್, ತೆಲಂಗಾಣದಿಂದ ರೇಣುಕಾ ಚೌಧುರಿ ಮತ್ತು ಎಂ ಅನಿಲ್ ಕುಮಾರ್ ಯಾದವ್ ಅವರ ಹೆಸರನ್ನೂ ಎರಡನೇ ಪಟ್ಟಿ ಒಳಗೊಂಡಿದೆ.

Read More
Next Story