
ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ಸಿಗೆ ಅಡ್ಡ ಮತದಾನದ ಭೀತಿ
ಕೋರಮಂಗಲದ ಎಂಬೆಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಹಿಲ್ಟನ್ ಹೋಟೆಲಿನಲ್ಲಿ ಕಾಂಗ್ರೆಸ್‌ನ ಎಲ್ಲ ಶಾಸಕರ ವಾಸ್ತವ್ಯ
ಬೆಂಗಳೂರು: ಮಂಗಳವಾರ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಕಾಂಗ್ರೆಸ್ಸಿಗೆ ಎದುರಾಗಿದೆ. ಹಾಗಾಗಿ ಎಲ್ಲ ಶಾಸಕರನ್ನು ಸೋಮವಾರ ಮಧ್ಯಾಹ್ನ ಹೋಟೆಲ್‌ಗೆ ಕರೆದೊಯ್ಯಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರು ಹೋಟೆಲ್‌ನಿಂದಲೇ ಮಂಗಳವಾರ ಬೆಳಗ್ಗೆ ಮತದಾನಕ್ಕೆ ಹೊರಡಲಿದ್ದಾರೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ (ಫೆ. 27) ಮತದಾನ ನಡೆಯಲಿದೆ. ಕಾಂಗ್ರೆಸ್‌ನ ಮೂವರು ಮತ್ತು ಎನ್‌ಡಿಎ ಮೈತ್ರಿಕೂಟದ ಇಬ್ಬರು ಕಣದಲ್ಲಿದ್ದಾರೆ.
ಮೂರು ಸ್ಥಾನ ಗೆಲ್ಲುವ ಅವಕಾಶ ಕಾಂಗ್ರೆಸ್‌ಗೆ ಇದ್ದರೂ ಎನ್‌ಡಿಎ ಮೈತ್ರಿಕೂಟವು ಮತಗಳ ಕೊರತೆಯ ಮಧ್ಯೆಯೂ ಡಿ.ಕುಪೇಂದ್ರ ರೆಡ್ಡಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದರಿಂದಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.
ಇಂದು ಕಾಂಗ್ರೆಸ್ನ ಎಲ್ಲ ಶಾಸಕರು ವಿಧಾನಸೌಧದಿಂದ ನೇರವಾಗಿ ಹೋಟೆಲ್‌ಗೆ ತೆರಳಲಿದ್ದಾರೆ. ಕೋರಮಂಗಲದ ಎಂಬೆಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಹಿಲ್ಟನ್ ಹೋಟೆಲ್‌ನಲ್ಲಿ ಕಾಂಗ್ರೆಸ್‌ನ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿಲ್ಟನ್ ಹೋಟೆಲ್‌ನಲ್ಲಿ ಸೋಮವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಅಲ್ಲಿ ಅಖೈರುಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿರುವ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಕೂಡಾ ಸಭೆಯಲ್ಲಿ ಪಾಲ್ಗೊಳ್ಳುವರು. ಪ್ರತಿ ಶಾಸಕರಿಗೂ ಪ್ರಾಶಸ್ಯದ ಮತಗಳ ಹಂಚಿಕೆ ಪಟ್ಟಿಯನ್ನು ನೀಡಲು ತಯಾರಿ ನಡೆದಿದೆ.
ಶಾಸಕರನ್ನು ಹೋಟೆಲ್‌ಗೆ ಕರೆತರುವ ಜವಾಬ್ದಾರಿಯನ್ನು ಬೈರತಿ ಸುರೇಶ್, ಕೃಷ್ಣ ಬೈರೇಗೌಡ ಸೇರಿದಂತೆ ಕೆಲವು ಸಚಿವರಿಗೆ ವಹಿಸಲಾಗಿದೆ. ಆಯಾ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸೋಮವಾರ ಹೋಟೆಲ್ ತಲುಪುವಂತೆ ನಿಗಾ ಇರಿಸುವ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಮತ್ತು ಕೆ.ಎಚ್. ಪುಟ್ಟಸ್ವಾಮಿಗೌಡ ಅವರನ್ನೂ ಹಿಲ್ಟನ್ ಹೋಟೆಲ್‌ಗೆ ಕರೆದೊಯ್ಯಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದಾರೆ.