ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ರಾಜೀವ್ ಗಾಂಧಿ: ಡಿಕೆಶಿ
x

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ರಾಜೀವ್ ಗಾಂಧಿ: ಡಿಕೆಶಿ


ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ರಾಜೀವ್ ಗಾಂಧಿ ಅವರು. ಸಾವಿರಾರು ಯುವ ನಾಯಕರನ್ನು ಸಮಾಜಕ್ಕೆ ಕೊಡುಗೆ ಕೊಟ್ಟ, ಯುವ, ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸಿದವರು ಅವರು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೆನಪಿಸಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದಾಗ ಕೆ.ಎಚ್.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈ ವೇಳೆ ಸುಮಾರು 70 ಕ್ಕೂ ಹೆಚ್ಚು ಯುವ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು.

ನಾನು, ಸಲೀಂ ಮಹಮ್ಮದ್, ರತ್ನಪ್ರಭ ಅವರು ಸೇರಿದಂತೆ ಅನೇಕರನ್ನು ಸುಮಾರು 180 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಕಳುಹಿಸಿದ್ದರು. ಕಾಂಗ್ರೆಸ್ ಪಕ್ಷದ ಯುವಕರಲ್ಲಿ ನಾಯಕತ್ವ ಗುಣ ಬೆಳೆಯಬೇಕು ಎಂದು ಒತ್ತು ನೀಡುತ್ತಿದ್ದರು. ಒಂದು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ನನ್ನಲ್ಲಿ, ಆ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂತ್ರಿಯಾಗಬಹುದು ಎನ್ನುವ ಭರವಸೆ ಮೂಡಿತ್ತು.

ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಜಯಪ್ರಕಾಶ್ ನಾರಾಯಣ್ ತರಬೇತಿ ಸಂಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಸುಧಾರಣೆಗೆ 73, 74 ನೇ ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ರಾಜೀವ್ ಗಾಂಧಿ ಅವರು “ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೂ ನಾಯಕತ್ವ ಬೆಳೆಯಬೇಕು. We create leaders, not followers” ಎಂದು ತಿದ್ದುಪಡಿಯ ಪರವಾಗಿ ಮಾತನಾಡಿದರು.

ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರ ಸ್ಮಾರಕ ನಿರ್ಮಾಣಕ್ಕೆ ಕನಕಪುರದ ಕಲ್ಲನ್ನು ಬಳಸಲಾಗಿದೆ. ಈ ಸೇವೆ ಮಾಡಲು ಸೋನಿಯಾ ಗಾಂಧಿ ಅವರು ನನಗೆ ಅವಕಾಶ ನೀಡಿದರು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧವೇ ನನಗೂ ಗಾಂಧಿ ಕುಟುಂಬಕ್ಕೂ ಇರುವುದು," ಎಂದರು.

Read More
Next Story