
ರಾಜಭವನ Vs ರಾಜ್ಯ ಸರ್ಕಾರ | ರಾಜ್ಯಪಾಲರ ವಾಪಸಾತಿಗೆ ರಾಷ್ಟ್ರಪತಿ ಮುಂದೆ ಪರೇಡ್‌ಗೆ ಕಾಂಗ್ರೆಸ್ ಪ್ಲ್ಯಾನ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕರು, ರಾಷ್ಟಪತಿ ಭವನದ ಮುಂದೆ ಪರೇಡ್ ನಡೆಸಲು ಪಕ್ಷದ ನಾಯಕರಿಗೆ ಒತ್ತಾಯಿಸಿದ್ದಾರೆ.
ಗುರುವಾರ ಶಾಸಕಾಂಗ ಪಕ್ಷದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿ ರಾಷ್ಟ್ರಪತಿಗಳ ಮುಂದೆ ಪರೇಡ್ ನಡೆಸುವ ಕುರಿತು ಆಡಳಿತ ಪಕ್ಷದ ಶಾಸಕರು ಚರ್ಚೆ ನಡೆಸಿದ್ದಾರೆ.
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಗುರುವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ಅನುಮತಿಸಿದರೆ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ ದಿನಾಂಕ ನಿಗದಿ ಮಾಡಿ ಎಲ್ಲ 135+1 ಶಾಸಕರನ್ನು ದೆಹಲಿಗೆ ಕರೆದೊಯ್ದು ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ.
ಶಾಸಕರ ಪರೇಡ್ ಮೂಲಕ ರಾಷ್ಟ್ರಪತಿಗಳ ಮುಂದೆ ಶಕ್ತಿ ಪ್ರದರ್ಶನ ಮಾಡಿ ನಮ್ಮದು ಬಹುಮತದ ಸರ್ಕಾರ ಎಂಬ ಸಂದೇಶ ರವಾನೆಗೆ ಕಸರತ್ತು ಮಾಡಲು ಸಿಎಂ ಮುಂದಾಗಿದ್ದಾರೆ.
ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ʻʻಶುಕ್ರವಾರ (ಆ.23) ಸಂಜೆ 4 ಗಂಟೆಗೆ ನಾನು ಮತ್ತು ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ. ರಾಷ್ಟ್ರಪತಿ ಮುಂದೆ ಪರೇಡ್ ನಡೆಸುವ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆʼʼ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ʻʻರಾಜ್ಯಪಾಲರ ತೀರ್ಮಾನವನ್ನು ಖಂಡಿಸುವ ಜತೆಗೆ, ಸರ್ವಾನುಮತದಿಂದ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುವ ನಿರ್ಣಯ ತೆಗೆದುಕೊಳ್ಳಲಾಯಿತು. ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ- ಜೆಡಿಎಸ್‌ನವರು ಎಷ್ಟೇ ಪ್ರಯತ್ನಿಸಿದರೂ ಸರ್ಕಾರವನ್ನು ಜಗ್ಗಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಸಂಚು ನಡೆಯುತ್ತಿದ್ದು, ನಾವು ಇದಕ್ಕೆ ಜಗ್ಗುವುದಿಲ್ಲʼʼ ಎಂದರು.
ʻಇಂಡಿಯಾʼ ಮೈತ್ರಿಕೂಟದ ಬೆಂಬಲ ಇದೆಯೇ ಎಂದು ಕೇಳಿದಾಗ, ʻʻಸದ್ಯ ರಾಜ್ಯದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ವರಿಷ್ಠರ ಜೊತೆ ಚರ್ಚಿಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆʼʼ ಎಂದರು.