ರಾಜ್ಯಪಾಲರು v/s ಸರ್ಕಾರ | ಆ.31ರಂದು ರಾಜಭವನ ಚಲೋ: ಡಿಕೆ ಶಿವಕುಮಾರ್‌ ಘೋಷಣೆ
x

ರಾಜ್ಯಪಾಲರು v/s ಸರ್ಕಾರ | ಆ.31ರಂದು ರಾಜಭವನ ಚಲೋ: ಡಿಕೆ ಶಿವಕುಮಾರ್‌ ಘೋಷಣೆ


ರಾಜ್ಯಪಾಲರು ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ ಹೋರಾಟ ಮುಂದುವರಿಸಿದ್ದು, ಎಚ್‌ ಡಿ ಕುಮಾರಸ್ವಾಮಿ ವಿರುದ್ಧದ ಗಣಿ ಅಕ್ರಮ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೇ ಇರುವ ರಾಜ್ಯಪಾಲರ ಧೋರಣೆ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತೆ ಹೋರಾಟಕ್ಕೆ ​ಕರೆ ನೀಡಿದ್ದಾರೆ.

ಮಂಗಳವಾರ (ಆ.27) ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ʻʻಆ.31ರಂದು ರಾಜಭವನ ಚಲೋ ನಡೆಸುತ್ತೇವೆ. ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಹೋಗಿ‌ ಎಚ್‌ ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣವೂ ಸೇರಿದಂತೆ ರಾಜ್ಯಪಾಲರ ಬಳಿ ಅನುಮತಿಗೆ ಬಾಕಿ ಇರುವ ಎಲ್ಲಾ ಪ್ರಾಸಿಕ್ಯೂಷನ್‌ ಅರ್ಜಿಗಳ ವಿಷಯದಲ್ಲೂ ಕೂಡಲೇ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸುತ್ತೇವೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗಿಯಾಗಬೇಕುʼʼ ಎಂದು ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್‌, ಇದೇ ವೇಳೆ ಕುಮಾರಸ್ವಾಮಿ ವಿರುದ್ಧʻʻನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಸಾಚಾ ಕೆಲಸ ಮಾಡುವವರು. ಇವರ ವಿರುದ್ಧ 10 ವರ್ಷಗಳ ಹಿಂದೆಯೇ ಪ್ರಕರಣ ದಾಖಲಾಗಿದೆ. 2023ರ ನವೆಂಬರ್ 21ರಂದು ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ನಾವೇನೂ ತಿರುಚಿ ಮಾತಾಡುತ್ತಿಲ್ಲ. 218 ಪುಟಗಳ ತನಿಖಾ ವರದಿಯನ್ನು ರಾಜ್ಯಪಾಲರಿಗೆ ಎಸ್‌ಐಟಿ ನೀಡಿದೆ. ಬಹಳ ಸತ್ಯಕ್ಕೆ ಹೆಸರಾದವರು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ, ನಾನು ಸಹಿಯೇ ಮಾಡಲಿಲ್ಲ ಎಂದು ಹೇಳಿದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯವಾಯಿತುʼʼ ಎಂದು ಹೇಳಿದರು.

ʻʻಅವರ ಸಹಿ ಅಲ್ಲ ಅಂದ ಮೇಲೆ ಯಾರೋ ಫೋರ್ಜರಿ ಮಾಡಿದ್ದಾರೆ. ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಯಾಕೆ ದೂರು ಕೊಟ್ಟಿಲ್ಲ? ಸಹಿ ಫೋರ್ಜರಿ ಆಗಿದ್ದಿದ್ದರೆ ಒಬ್ಬ ಪಿಸಿಗಾದರೂ ದೂರು ಕೊಡಬೇಕಲ್ವಾ?ʼʼ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

Read More
Next Story