
ಬೆಂಗಳೂರಿನಲ್ಲಿ ಸಂಜೆ ಮಳೆಯಾಗುವ ಸಾಧ್ಯೆತೆ ಇದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್: ಬೆಂಗಳೂರಿಗೆ ಮಳೆಯ ಸಿಂಚನ
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 19°C ಮತ್ತು ಗರಿಷ್ಠ ತಾಪಮಾನ 26°C ಇರಲಿದೆ. ಮೋಡ ಕವಿದ ವಾತಾವರಣ ಮತ್ತು ಆಗಾಗ್ಗೆ ಸುರಿಯುವ ಮಳೆಯ ಕಾರಣದಿಂದಾಗಿ ಬೆಳಗಿನ ಜಾವ ಮತ್ತು ಸಂಜೆಯ ವೇಳೆ ತಂಪಾದ ವಾತಾವಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹವಾಮಾನದಲ್ಲಿ ಹಠಾತ್ ಬದಲಾವಣೆ ಕಂಡುಬಂದಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈಗಾಗಲೇ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಚಳಿಯ ವಾತಾವರಣ ಆವರಿಸಿಕೊಂಡಿದ್ದು, ಇದೀಗ ಅಕಾಲಿಕ ಮಳೆಯ ಮುನ್ಸೂಚನೆಯಿಂದಾಗಿ ಶೀತಗಾಳಿ ಮತ್ತು ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸಿಲಿಕಾನ್ ಸಿಟಿಯಲ್ಲಿ 'ಕೂಲ್' ವೆದರ್
ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಲಘು ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರ ಸಂಜೆಯೂ ನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ವಾರಾಂತ್ಯದಲ್ಲೂ ವರುಣನ ಹಾಜರಾತಿ ಇರಲಿದೆ.
ನಗರದಲ್ಲಿ ಕನಿಷ್ಠ ತಾಪಮಾನ 19°C ಮತ್ತು ಗರಿಷ್ಠ ತಾಪಮಾನ 26°C ದಾಖಲಾಗುವ ನಿರೀಕ್ಷೆಯಿದೆ. ಬೆಳಗಿನ ಜಾವ ಮತ್ತು ಸಂಜೆಯ ವೇಳೆ ತಂಪಾದ ವಾತಾವರಣವಿರಲಿದ್ದು, ಮೋಡ ಕವಿದ ವಾತಾವರಣ ಹಾಗೂ ಆಗಾಗ್ಗೆ ಸುರಿಯುವ ತುಂತುರು ಮಳೆಯಿಂದಾಗಿ ಬೆಂಗಳೂರಿಗರು ಸ್ವೆಟರ್ ಮೊರೆಹೋಗುವಂತಾಗಿದೆ.
ಯಾವ ಜಿಲ್ಲೆಗಳಲ್ಲಿ ಮಳೆ?
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಳೆಯ ಆರ್ಭಟ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ.
ಕರಾವಳಿ ಭಾಗ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು: ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.
ಮುಂದುವರೆಯಲಿರುವ ಚಳಿ
ರಾಜ್ಯದ ಬಹುತೇಕ ಭಾಗಗಳಲ್ಲಿ ಸೂರ್ಯನ ದರ್ಶನ ಕಡಿಮೆಯಾಗಲಿದ್ದು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮಳೆ ಮತ್ತು ಶೀತಗಾಳಿಯ ಮಿಶ್ರಣದಿಂದಾಗಿ ಹಗಲಿನಲ್ಲಿಯೂ ತಾಪಮಾನ ಇಳಿಕೆಯಾಗಲಿದ್ದು, ಮುಂದಿನ 24 ಗಂಟೆಗಳ ಕಾಲ ರಾಜ್ಯಾದ್ಯಂತ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

