ಮುಂಗಾರು ಮಳೆ ಆಗಮನಕ್ಕೆ  ರೆಮನ್ ಚಂಡಮಾರುತದ ಅವಕೃಪೆ
x
ಮಳೆ

ಮುಂಗಾರು ಮಳೆ ಆಗಮನಕ್ಕೆ ರೆಮನ್ ಚಂಡಮಾರುತದ ಅವಕೃಪೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.


Click the Play button to hear this message in audio format

ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಕಾಲ ಬೆಂಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ರಾಜ್ಯಕ್ಕೆ ಮೇ 31ರಂದು ಮುಂಗಾರು ಪ್ರವೇಶಿಸಲಿದೆ.ಯೆಲ್ಲೋ ಮತ್ತು ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಸಿಡಿಲು ಬಡಿದು ಇಬ್ಬರ ಸಾವು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಏಕನಾಥ್ ವಾಘಮೂಡೆ(55) ಹಾಗೂ ಸತೀಶ್ ಶಳಕೆ(40) ಮೃತರು. ಇಬ್ಬರೂ ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ನಿವಾಸಿಗಳಾಗಿದ್ದು, ಮಳೆ ಬಂದ ಹಿನ್ನೆಲೆ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಗುರುಮಠಕಲ್ ಹಾಗೂ ಯಾದಗಿರಿ ನಗರದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಭಾರಿ ಮಳೆಗೆ ಗುರುಮಠಕಲ್ ರಸ್ತೆ ಮೇಲೆ ನೀರು ಹರಿದು ಕೆರೆಯಂತಾಗಿತ್ತು. ಯಾದಗಿರಿಯ ಗಣಾಪುರ ಸಮೀಪದ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಮರಗಳು ಬಿದ್ದಿತ್ತು. ಗುರುಮಠಕಲ್-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದಿತ್ತು. ಹೀಗಾಗಿ ಸ್ಥಳೀಯರು ಹಾಗೂ ಸವಾರರಿಂದಲೇ ರಸ್ತೆ ಮೇಲೆ ಬಿದ್ದಿದ್ದ ಮರಗಳ ತೆರವು ಮಾಡಲಾಯಿತು. ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡರು. ರಸ್ತೆ ಮೇಲೆ ಮರಗಳು ಬಿದ್ದ ಕಾರಣದಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಇಂದಿನಿಂದ ಜೂನ್ 3ರವರೆಗೆ ಹಾಗೂ ಜೂನ್ 3ರಿಂದ ಜೂನ್ 11ರವರೆಗೆ ಭಾರೀ ಮಳೆಯಾಗಲಿದೆ. ಎರಡನೇ ಹಂತದಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಜೂನ್ 03ರವರೆಗೆ ರಾಜ್ಯದಲ್ಲಿ ರೆಮನ್ ಚೆಂಡಮಾರುತದ ಪ್ರಭಾದಿಂದ ಭಾರೀ ಮಳೆ ಆಗಲಿದೆ. ಚಂಡಮಾರುತದ ಗಾಳಿಯ ವೇಗ ಪ್ರತಿ ಗಂಟೆಗೆ 135 ಕಿಮೀ ವೇಗದಲ್ಲಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನೂ ಜೂನ್ 3ರಿಂದ ಜೂನ್ 11ರವರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಧಿಕ ಮಳೆ ಆಗಬಹುದು. ಅಷ್ಟೊತ್ತಿಗಾಗಲೇ ಕರ್ನಾಟಕ ಸೇರಿದಂತೆ ದೇಶದಲ್ಲಿ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಜೊತೆಗೆ ಚಂಡಮಾರುತದ ಹಾವಳಿ ತಗ್ಗದಿದ್ದರೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಹಲವೆಡೆ ಮಳೆ ಆಗಿದೆ. ಇನ್ನೂ ಕೆಲವೆಡೆ ಉತ್ತಮ ಮಳೆಗಾಗಿ ಕಾಯುತ್ತಿದ್ದು, ರೈತರು ಮುಂಗಾರು ಹಂಗಾಮು ಬಿತ್ತನೆ ಸಜ್ಜಾಗಿದ್ದಾರೆ.

Read More
Next Story