Weather Updates | ಬೆಂಗಳೂರಿನಲ್ಲಿ ಮುಂದುವರಿದ ಮಳೆ; ವಾಹನ ದಟ್ಟಣೆ, ಜನಜೀವನ ಅಸ್ತವ್ಯಸ್ತ
x
ಬೆಂಗಳೂರಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ

Weather Updates | ಬೆಂಗಳೂರಿನಲ್ಲಿ ಮುಂದುವರಿದ ಮಳೆ; ವಾಹನ ದಟ್ಟಣೆ, ಜನಜೀವನ ಅಸ್ತವ್ಯಸ್ತ

ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಗುರುವಾರವೂ ತುಂತುರು ಮಳೆ ಮುಂದುವರಿದಿದ್ದು, ವಾಹನ ಸಂಚಾರ ವ್ಯತ್ಯಯವಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣ ಇತ್ತು.


ಬೆಂಗಳೂರಿನಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣದೊಂದಿಗೆ ನಗರದ ಬಹುತೇಕ ಕಡೆ ತುಂತುರು ಮಳೆ ಸುರಿಯುತ್ತಿದೆ.

ಅರ್ಧಗಂಟೆಗೆ ಒಮ್ಮೆಯಂತೆ ತುಂತುರು ಮಳೆ ಸುರಿಯುತ್ತಿದ್ದು, ಕೆಲವು ಕಡೆ ಜೋರಾಗಿಯೂ ಮಳೆ ಸುರಿದ ಪರಿಣಾಮ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಬೆಂಗಳೂರಿನ ಕೆಂಗೇರಿ, ನಾಗರಾಬಾವಿ, ಕೆ.ಆರ್‌. ಮಾರುಕಟ್ಟೆ, ಮೈಸೂರು ರಸ್ತೆ, ಬಸವನಗುಡಿ, ಮೆಜೆಸ್ಟಿಕ್‌, ಹೆಬ್ಬಾಳ, ಯಲಹಂಕ, ಶಾಂತಿನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಧ್ಯಾಹ್ನ 1 ಗಂಟೆಯವರೆಗೂ ಆಗಾಗ ಮಳೆ ಸುರಿದಿದೆ. ಮೈಸೂರು ರಸ್ತೆ, ಪೀಣ್ಯ-ಜಾಲಹಳ್ಳಿ ಹಾಗೂ ಹೆಬ್ಬಾಳದಲ್ಲಿ ಮಳೆಯಿಂದಾಗಿ ವಾಹನ ದಟ್ಟಣೆ ತೀವ್ರವಾಗಿತ್ತು. ತುಂತುರು ಮಳೆಯಲ್ಲೇ ವಾಹನ ಸವಾರರು ಸಾಗಿದರು.

ಬೆಂಗಳೂರಿನ ಹನುಮಂತನಗರದಲ್ಲಿ ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಮರವನ್ನು ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದರು. ವಿವಿಧೆಡೆ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಮಳೆಯಲ್ಲೇ ಹರಸಾಹಸಪಟ್ಟರು.

ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

Read More
Next Story