
ಮಲೆನಾಡು ಮಳೆ ಹಾನಿ | ಹನಿ ನಿಂತರೂ ನಿಲ್ಲದ ಹಾನಿ: ಪ್ರವಾಸಿಗರ ನಿರ್ಬಂಧ ಮತ್ತೆ ವಿಸ್ತರಣೆ
ಮಳೆ ಅಬ್ಬರ ಕಡಿಮೆಯಾಗಿದ್ದರೂ ನದಿ-ಹಳ್ಳಗಳ ಪ್ರವಾಹ ಪರಿಸ್ಥಿತಿಯಾಗಲೀ, ಗುಡ್ಡು, ಝರಿಗಳ ಕುಸಿತದ ಅಪಾಯವಾಗಲೀ ಕಡಿಮೆಯಾಗಿಲ್ಲ. ಅತಿವೇಗದ ಬಿರುಗಾಳಿಯಂತೂ ನಿಂತಿಲ್ಲ. ಹಾಗಾಗಿ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರಕನ್ನಡ ವ್ಯಾಪ್ತಿಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗಳ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧ ಇನ್ನೂ ತೆರವಾಗಿಲ್ಲ.
ಮಲೆನಾಡಿನಲ್ಲಿ ಮಳೆ ಅಬ್ಬರ ತುಸು ತಗ್ಗಿದೆ. ಕಳೆದ ಹತ್ತು ದಿನಗಳಿಂದ ಭಾರೀ ಮಳೆ ಹಾನಿಗೆ ತುತ್ತಾಗಿದ್ದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾನುವಾರದಿಂದ ಮಳೆಯ ಬಿರುಸು ಕಡಿಮೆಯಾಗಿದೆ.
ದಿನಕ್ಕೆ 24-25 ಸೆಂಟಿ ಮೀಟರ್‌ನಷ್ಟು ಭಯಾನಕ ಮಳೆ ಕಂಡಿದ್ದ ಹೊಸನಗರ, ತೀರ್ಥಹಳ್ಳಿ, ಸಾಗರದ ಘಟ್ಟಪ್ರದೇಶಗಳಲ್ಲಿ ಇದೀಗ ಜಿಟಿಜಿಟಿ ಮಳೆ ಮಾತ್ರ ಮುಂದುವರಿದಿದೆ. ಆದರೆ ಬಿಸಿಲು ಎಂಬುದು ಇನ್ನೂ ಬಹುತೇಕ ಮರೀಚಿಕೆಯಾಗಿಯೇ ಉಳಿದಿದೆ.
ಹಾಗಾಗಿ, ಮಳೆ ಕಡಿಮೆಯಾಗಿದೆ ಎಂದು ನೀವು, ಮಲೆನಾಡಿನ ಗಿರಿಕಂದರಗಳನ್ನು ಸುತ್ತಿಬರೋಣ ಎಂದುಕೊಂಡರೆ, ತುಸು ತಡೆಯಿರಿ. ಏಕೆಂದರೆ ಮಳೆ ಅಬ್ಬರ ಕಡಿಮೆಯಾಗಿದ್ದರೂ ನದಿ-ಹಳ್ಳಗಳ ಪ್ರವಾಹ ಪರಿಸ್ಥಿತಿಯಾಗಲೀ, ಗುಡ್ಡು, ಝರಿಗಳ ಕುಸಿತದ ಅಪಾಯವಾಗಲೀ ಕಡಿಮೆಯಾಗಿಲ್ಲ. ಅತಿವೇಗದ ಬಿರುಗಾಳಿಯಂತೂ ನಿಂತಿಲ್ಲ. ಹಾಗಾಗಿ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರಕನ್ನಡ ವ್ಯಾಪ್ತಿಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗಳ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧ ಇನ್ನೂ ತೆರವಾಗಿಲ್ಲ.
ಚಿಕ್ಕಮಗಳೂರಿನಲ್ಲಿ ಜು.29ರವರೆಗೆ ನಿರ್ಬಂಧ
ಚಿಕ್ಕಮಗಳೂರಿನ ಪ್ರಸಿದ್ಧ ಗಿರಿಧಾಮಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾ ಬುಡಾನ್ ದತ್ತಾತ್ರೇಯ ಪೀಠ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಕುದುರೆಮುಖ ಮುಂತಾದ ಜಾಗಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಗುಡ್ಡುಕುಸಿತ ಮತ್ತು ಮರಗಳು ಉರುಳುವ ಅಪಾಯದ ಜೊತೆಗೆ ಪ್ರವಾಸಿಗರ ರೀಲ್ಸ್, ವೀಲಿಂಗ್ ಮುಂತಾದ ಹುಚ್ಚಾಟಗಳು ಜೀವಕ್ಕೆ ಅಪಾಯ ತರುವ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ.
ಸೋಮವಾರ ಚಿಕ್ಕಮಗಳೂರಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿರುವ ಮಳೆಹಾನಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಅಪಾಯಕಾರಿ ಪ್ರವಾಸಿ ತಾಣಗಳಿಗೆ ಭಾರೀ ಮಳೆಯಿಂದಾಗಿ ಹೇರಲಾಗಿರುವ ಪ್ರವಾಸಿಗರ ಪ್ರವೇಶ ನಿರ್ಬಂಧ ಜು.29ರವರೆಗೆ ಮುಂದುವರಿಯಲಿದೆ. ಹಲವು ಪ್ರವಾಸಿ ತಾಣಗಳ ದಾರಿಗಳಲ್ಲಿ ಮರ ಬಿದ್ದಿವೆ, ಕೆಲವು ಕಡೆ ಭೂ ಕುಸಿತ ಸಂಭವಿಸಿದೆ. ಹಾಗಾಗಿ ಇನ್ನೂ ಒಂದು ವಾರ ಪ್ರವೇಶ ನಿಷೇಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲೂ ಮುಂದುವರಿದ ನಿರ್ಬಂಧ
ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ ಹಲವು ಜಲಪಾತ ಮತ್ತು ಗಿರಿಧಾಮಗಳಿಗೆ ಜಿಲ್ಲಾ ಪೊಲೀಸರು ನಿರ್ಬಂಧ ಹೇರಿದ್ದಾರೆ. ಆ ಕುರಿತು ಬಹುತೇಕ ಪ್ರವಾಸಿ ತಾಣಗಳಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದ್ದು, ಮಳೆ ಮತ್ತು ಪ್ರವಾಹ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬರುವವರೆಗೆ ಈ ನಿರ್ಬಂಧಗಳು ಮುಂದುವರಿಯಲಿವೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಇನ್ನು ಉತ್ತರಕನ್ನಡ ಜಿಲ್ಲೆಯ ಹಲವು ಜಲಪಾತಗಳು ಮತ್ತು ಪ್ರವಾಸಿ ತಾಣಗಳಲ್ಲೂ ಈ ಹಿಂದೆ ವಿಧಿಸಲಾಗಿರುವ ನಿರ್ಬಂಧಗಳನ್ನುಸಡಿಲಿಸಲಾಗಿಲ್ಲ. ಉಳಿದೆಡೆಗಿಂತ ಈ ಬಾರಿ ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಭೂಕುಸಿತ ಪ್ರಕರಣಗಳು ವರದಿಯಾಗಿದ್ದು, ಆ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಹೊರಡಿಸಿರುವ ಸೂಚನೆಯನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ.
ಮಡಿಕೇರಿ ಭಾಗದಲ್ಲೂ ಭೂಕುಸಿತ
ರಾಜ್ಯದ ಮತ್ತೊಂದು ಪ್ರಮುಖ ಪ್ರವಾಸಿ ತಾಣ ಮಡಿಕೇರಿಯಲ್ಲಿ ಕೂಡ ಮಳೆ ಹಾನಿ ಈ ಬಾರಿ ತೀವ್ರವಾಗಿದ್ದು, ಹಲವು ಕಡೆ ಭೂ ಕುಸಿತ ಸಂಭವಿಸಿದೆ. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಕಳೆದ ವಾರವೇ ವಿಧಿಸಲಾಗಿದ್ದು ಪ್ರವಾಸಿಗಳ ನಿರ್ಬಂಧ ಇನ್ನೂ ಒಂದು ವಾರ ಮುಂದುವರಿಸಲಾಗಿದೆ.
ಹಾಗಾಗಿ, ಮಲೆನಾಡಿನ ಜಲಪಾತಗಳು, ಗಿರಿಧಾಮಗಳತ್ತು ಮುಖ ಮಾಡಿದ್ದರೆ, ನೀವು ಈ ತಿಂಗಳ ಅಂತ್ಯದವರೆಗೆ ಕಾಯುವುದು ಸುರಕ್ಷಿತ.