ಶಿವಮೊಗ್ಗದಲ್ಲಿ ಮಳೆ ವೈಭವ; ಜೋಗದಲ್ಲಿ  ರಾಜಾ, ರಾಣಿ, ರೋರರ್‌ ,ರಾಕೆಟ್‌ ನರ್ತನ
x

ಶಿವಮೊಗ್ಗದಲ್ಲಿ ಮಳೆ ವೈಭವ; ಜೋಗದಲ್ಲಿ ರಾಜಾ, ರಾಣಿ, ರೋರರ್‌ ,ರಾಕೆಟ್‌ ನರ್ತನ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ, ಶೃಂಗೇರಿ , ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಭಾಗದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ತುಂಗಾ ನದಿಗೆ ಅಪಾರ ಪ್ರಮಾಣದ ಒಳ ಹರಿವಿದೆ. ಈ ಕಾರಣದಿಂದ ತುಂಗಾ ನದಿ ಮೈ ದುಂಬಿ ಹರಿಯುತ್ತಿದೆ.


ಜಗತ್ಪ್ರಸಿದ್ಧ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌, ರಾಕೆಟ್‌ಗಳು ಕುಣಿದು ಕುಪ್ಪಳಿಸಲಿವೆ. ಜಲಪಾತ ವೀಕ್ಷಿಸುವ ಪ್ರವಾಸಿಗರ ಕಣ್ಣಿನ ಹಬ್ಬ ಆರಂಭವಾಗಿದೆ.

ಮಂಗಳವಾರ ಬೆಳಿಗ್ಗೆ ಲಿಂಗನಮಕ್ಕಿ ಜಲಾಶಯದ ಗೇಟು ತೆರೆದು ನದಿಗೆ ನೀರು ಬಿಟ್ಟಿರುವ ಕಾರಣ ಜೋಗ ಜಲಪಾತದಲ್ಲಿಸ ಜಲವೈಭವ ಸೃಷ್ಟಿಯಾಗಿದೆ. ಅಪಾರ ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌ ,ರಾಕೆಟ್‌ ಎಲ್ಲಾ ಜಲಪಾತಗಳು ಒಟ್ಟಿಗೇ ಧುಮ್ಮಿಕ್ಕುವ ಮೂಲಕ ಅಲ್ಲೊಂದು ಅದ್ಭುತ ಲೋಕವೇ ಸೃಸ್ಟಿಯಾಗಿದೆ.


ಲಿಂಗನಮಕ್ಕಿಯಿಂದ ನದಿಗೆ ನೀರು, ಮಲೆನಾಡು ಶಿವಮೊಗ್ಗದಲ್ಲಿ ಈಗ ಮಳೆ ವೈಭವ. ಹಳ್ಳಕೊಳ್ಳ , ಝರಿ-ತೊರೆ ಎಲ್ಲೆಂದರಲ್ಲಿ ನೀರು..ನೀರು.. ಮತ್ತು ನೀರು. ಅತಿಯಾದ ಮಳೆ ಕೃಷಿಗೆ ಪ್ರತಿಕೂಲವಾಗಿ ಪರಿಣಮಿಸಿದೆಯಾದರೂ ನಿಜಾರ್ಥದಲ್ಲಿ ಈಗ ಮಳೆನಾಡಿಗೊಂದು ಕಳೆಯಂತೂ ಬಂದಿದೆ.


ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಶಕ್ತಿ ನದಿ ಶರಾವತಿ ಮೈದುಂಬಿದ್ದು, ಲಿಂಗನಮಕ್ಕಿ ಡ್ಯಾಂ ಸತತ ಮೂರನೇ ವರ್ಷವೂ ತುಂಬಿ ದಾಖಲೆ ನಿರ್ಮಿಸಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 1816 ಅಡಿ ನೀರು ಬಂದಿದ್ದರಿಂದ ನದಿಗೆ 15 ಸಾವಿರ ಕ್ಯೂಸೆಕ್ಸ್‌ ನೀರನ್ನು ಬಿಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 1819 ಆಗಿದ್ದು, ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಿಂದ ವ್ಯಾಪಕ ಮಳೆಯಾಗಿದ್ದರಿಂದ ಅಣೆಕಟ್ಟೆ ಗೇಟ್‌ ತೆರೆಯಲಾಗಿದೆ. ಮಂಗಳವಾರ ಬೆಳಗ್ಗೆ ಕೆಪಿಸಿ (ಕರ್ನಾಟಕ ವಿದ್ಯುತ್‌ ನಿಗಮ) ಹಿರಿಯ ಅಧಿಕಾರಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ ಬಳಿಕ ಡ್ಯಾಮಿನ ಬಾಗಿಲು ಎತ್ತಲಾಗಿದೆ. ಮುಖ್ಯ ಎಂಜನಿಯರುಗಳಾದ ಹೆಚ್.ಆರ್.ರಮೇಶ್‌, ಎಂ.ಮಾದೇಶ್‌, ಕಾರ್ಯಪಾಲಕ ಎಂಜನಿಯರ್‌ ಆರ್.ಶಿವಕುಮಾರ್‌, ಎಸ್.ಸಿ. ವಾಸುದೇವಮೂರ್ತಿ, ಶ್ರೀ ಲಕ್ಷ್ಮಿ, ಎಂಜಿಯರ್‌ಗಳಾದ ರೋಹಿತ್‌, ಪ್ರದೀಪ್‌, ಧರಣೇಶ್‌, ರಾಜು ಹಾಗೂ ಸಂತೋಷ್‌ ಮತ್ತಿತರರು ಈ ಕ್ರಿಯೆಗೆ ಚಾಲನೆ ನೀಡಿದ್ದಾರೆ.


ತುಂಬಿದ ತುಂಗೆ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ, ಶೃಂಗೇರಿ , ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಭಾಗದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ತುಂಗಾ ನದಿಗೆ ಅಪಾರ ಪ್ರಮಾಣದ ಒಳ ಹರಿವಿದೆ. ಈ ಕಾರಣದಿಂದ ಶಿವಮೊಗ್ಗ ಪಟ್ಟಣದಲ್ಲಿ ತುಂಗಾ ನದಿ ಮೈ ದುಂಬಿ ಹರಿಯುತಿದ್ದು, ತಗ್ಗು ಪ್ರದೇಶಗಳಿಗೆ ಎಚ್ಚರಿಗೆ ನೀಡಲಾಗಿದೆ.

ಕೋರ್ಪಲಯ್ಯನ ಛತ್ರದ ಬಳಿ ಇರುವ ಮಂಟಪ ಮುಳುಗಿದೆ. ಅತ್ತ ಭದ್ರಾ ನದಿಯೂ ಮೈದುಂಬಿ ಹರಿಯುತ್ತಿದ್ದು, ಕೃಷಿ ಉದ್ದೇಶದಿಂದ ನದಿಯಿಂದ ಈಗಾಗಲೇ ನಾಲೆಗಳಿಗೆ ನೀರು ಬಿಡಲಾಗಿದೆ. ಕೃಷಿ ಉದ್ದೇಶದ ಎಲ್ಲಾ ಜಲಾಶಯಗಳು ತುಂಬಿದ್ದು, ನದಿಗೆ ನೀರು ಬಿಡಲಾಗಿದೆ.

ಕೃಷಿಗೆ ಕಂಟಕ

ಮಲೆನಾಡಿನಲ್ಲಿ ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವೇ ಆಗಿದೆ ಎಂದು ಹೇಳಬಹುದು. ಸತತ ಮೂರು ತಿಂಗಳಿಂದ ನಿರಂತರ ಮಳೆಯಾಗುತ್ತಿರುವ ಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಹಾನಿಯಾಗಿದೆ.

ಮೆಕ್ಕೆಜೋಳ, ಹತ್ತಿ, ಶೇಂಗಾ, ರಾಗಿ,ಸೂರ್ಯಕಾಂತಿ ಮತ್ತು ತರಕಾರಿ ಬೆಳೆಗಳ ಇಳುವರಿಯಲ್ಲಿ ಭಾರೀ ಕುಂಠಿತವಾಗುವ ಸಾಧ್ಯತೆಯಿದೆ. ಶುಂಠಿ ಹಾಗೂ ಅಡಕೆ ಬೆಳೆಗಳಿಗೆ ಕೊಳೆರೋಗದ ಬಾಧೆ ಕಾಡುತ್ತಿದೆ. ತಗ್ಗು ಪ್ರದೇಶಗಳಲ್ಲಿ ಭತ್ತದ ಸಸಿಮಡಿಗಳು ಕೊಚ್ಚಿ ಹೋಗಿದ್ದರೂ, ಕೊನೆಗೆ ಭತ್ತ ನಾಟಿ ಎಲ್ಲೆಡೆ ಸುಸೂತ್ರವಾಗಿ ಸಾಗಿದೆ.

Read More
Next Story