ಪುಷ್ಯ ಮಳೆ ಅಬ್ಬರ | ಭಾರೀ ಬಿರುಗಾಳಿ ಮಳೆ, ಪ್ರವಾಹ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ
x

ಪುಷ್ಯ ಮಳೆ ಅಬ್ಬರ | ಭಾರೀ ಬಿರುಗಾಳಿ ಮಳೆ, ಪ್ರವಾಹ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ


ರಾಜ್ಯದ ಹಲವಡೆ ಮಳೆ ಮುಂದುವರಿದಿದ್ದು, ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಧಾರವಾಡ, ಉತ್ತರಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಕೆಲವು ಶಾಲೆಗಳಿಗೆ ಮುನ್ನೆಚರಿಕಾ ಕ್ರಮವಾಗಿ ಗುರುವಾರ ರಜೆ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಕರಾವಳಿಯ ಉತ್ತರಕನ್ನಡ ಜಿಲ್ಲೆಗೆ 'ಆರೆಂಜ್ ಅಲರ್ಟ್' ಹಾಗೂ ಇತರೆ ಏಳು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಉತ್ತರಕನ್ನಡ ಜಿಲ್ಲೆಯ ಕೆಲ ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸಂಭವವಿದೆ. ಕಲಬುರಗಿ, ವಿಜಯಪುರ, ಬೆಳಗಾವಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿಯೂ ಕೆಲವೆಡೆ ಭಾರಿ ಮಳೆಯೊಂದಿಗೆ ಗಾಳಿಯ ವೇಗವು 40ರಿಂದ 50 ಕಿ.ಮೀ. ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35 ಕಿ.ಮೀ.ಯಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 30ರಿಂದ 40 ಕಿ.ಮೀ. ತಲುಪುವ ಸಂಭವವಿದೆ ಎಂದು ತಿಳಿಸಿದೆ. ಶುಕ್ರವಾರವೂ ಕರಾವಳಿ ಹಾಗೂ ಮಲೆನಾಡಿನ ಆರು ಜಿಲ್ಲೆಗಳಿಗೆ `ಯೆಲ್ಲೊ ಅಲರ್ಟ್ʼ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಚಿಕ್ಕಮಗಳೂರು: ಆರು ತಾಲೂಕಿನ ಶಾಲೆಗೆ ರಜೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಮತ್ತು ಬಿರುಗಾಳಿ ಬೀಸುತ್ತಿರುವುದರಿಂದ ಐದು ತಾಲ್ಲೂಕಿನ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ಅಂಗನವಾಡಿ ಮತ್ತು ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿದೆ.

ಕೊಡಗು ಜಿಲ್ಲೆಯ ಕೆಲವೆಡೆ ಶಾಲೆಗೆ ರಜೆ

ದಕ್ಷಿಣ‌ ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ‌ ಹಿನ್ನೆಲೆ ಪೊನ್ನಂಪೇಟೆ ತಾಲೂಕಿನ ಕುಟ್ಟ, ಟಿ.ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ. ಇನ್ನು ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.

ಉತ್ತರಕನ್ನಡ ಶಾಲಾ-ಕಾಲೇಜಿಗೆ ನಾಳೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 7 ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ (ಜುಲೈ 25) ರಜೆ ಘೋಷಣೆ ಮಾಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ದಾಂಡೇಲಿ, ಹೊನ್ನಾವರ, ಜೋಯಿಡಾ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 25, 26ರಂದು ರಜೆ

ಧಾರವಾಡ ಜಿಲ್ಲೆಯಲ್ಲೂ ಸಹ ಮಳೆ ಆರ್ಭಟ ಜೋರಾಗಿರುವುದರಿಂದ ಜುಲೈ 25ರ ಗುರುವಾರ ಮತ್ತು 26 ರ ಶುಕ್ರವಾರ; ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಧಾರವಾಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯಲ್ಲಿ ಜನಜೀವನ ಅಸ್ತವ್ಯಸ್ತ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಮಾಂಗವಸ್ತಿ ಗ್ರಾಮಗಳನ್ನು ಕೃಷ್ಣಾ ಪ್ರವಾಹ ಸುತ್ತುವರಿದು ನಡುಗಡ್ಡೆಯಾಗಿದ್ದು, ಜನ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಪರದಾಡುತ್ತಿದ್ದಾರೆ. ನದಿಯ ಮತ್ತೊಂದು ದಡದಲ್ಲಿ ನಿಂತು ಗ್ರಾಮಸ್ಥರಿಗೆ ಸ್ಥಳಾಂತರವಾಗುವಂತೆ ತಹಶೀಲ್ದಾರ್​, ಪೊಲೀಸರ ಮನವಿ ಮಾಡಿದ್ದಾರೆ. ಆದರೆ, ಬೇರೆ ಕಡೆ ಜಾಗ ತೋರಿಸಿ ಹಕ್ಕು ಪತ್ರ ನೀಡಬೇಕು. ಅಲ್ಲಿವರೆಗೂ ಸ್ಥಳಾಂತರ ಆಗಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಪ್ರತಿ ಬಾರಿ ಪ್ರವಾಹ ಬಂದಾಗ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿ ಬಳಿಕ ಪ್ರವಾಹ ಸಮಸ್ಯೆಯನ್ನು ಮರೆತುಬಿಡುವ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಈ ಬಾರಿ ರೊಚ್ಚಿಗೆದ್ದಿದ್ದು, ಪ್ರವಾಹ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕೈಗೊಳ್ಳುವವರೆಗೆ ಮುಳುಗಡೆಯಾಗಿರುವ ಗ್ರಾಮಗಳಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಜೀವ ಬಿಟ್ಟೇವು ಸ್ಥಳಾಂತರ ಆಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಆರಂಭದಲ್ಲಿ ಸುಮಾರು ಐವತ್ತು ಮನೆಗಳು ಮುಳುಗುವ ಸಾಧ್ಯತೆಯಿದ್ದು, ನಡುಗಡ್ಡೆಯಲ್ಲಿ ಹಲವು ಕುಟುಂಬಗಳು ಸಿಲುಕಿದೆ. ಇತ್ತ ಗ್ರಾಮಸ್ಥರು ಮನವಿಗೆ ಸ್ಪಂಧಿಸದ ಹಿನ್ನಲೆ ಅಥಣಿ ತಹಶೀಲ್ದಾರ್ ವಾಣಿ ವಾಪಾಸ್ ಬಂದಿದ್ದಾರೆ. ಪ್ರವಾಹ ಬಂದಾಗ ಬರುತ್ತಾರೆ, ಆಶ್ವಾಸನೆ ನೀಡಿ ಹೋಗುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕಾರದಗಾ ಗ್ರಾಮದಲ್ಲೂ ಪ್ರವಾಹ

ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲೂ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ದೂದಗಂಗಾ ನದಿ ನೀರು ಗ್ರಾಮಕ್ಕೆ ನುಗ್ಗಿದೆ. ಇದರಿಂದ ಗ್ರಾಮದ ಹತ್ತಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪಶು ಆಸ್ಪತ್ರೆ, ಯಲ್ಲಮ್ಮ ದೇವಸ್ಥಾನ, ಗಣಪತಿ ದೇವಸ್ಥಾನ, ದತ್ತ ಮಂದಿರ, ಗಾಡಗೆ ಮಹಾರಾಜ ಸನ್ನಿಧಿ ಮುಳುಗಡೆಯಾಗಿದೆ. ಜೊತೆಗೆ ಜಂಗಲಿ ಮಹರಾಜ ಶಾಲೆ ಹಿಂಬದಿಯೇ ನದಿ ನೀರು ಬಂದಿದ್ದು, ಆತಂಕದಲ್ಲಿಯೇ ಸಿಬ್ಬಂದಿ ಶಾಲೆ ನಡೆಸುತ್ತಿದ್ದಾರೆ.

Read More
Next Story