ರಾಹುಲ್ ಗಾಂಧಿ ರಾಷ್ಟ್ರದ ಕ್ಷಮೆ ಕೇಳಬೇಕು: ಸಿಟಿ ರವಿ
ಸಹಸ್ರಾರು ವರ್ಷದ ಸನಾತನ ಪರಂಪರಗೆ ಅಪಮಾನದ ಕೆಲಸ ಮಾಡಿರುವ ರಾಹುಲ್ ಗಾಂಧಿ ಅವರು ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಸೋಮವಾರ ಲೋಕಸಭಾ ಕಲಾಪದಲ್ಲಿ ರಾಹುಲ್ ಗಾಂಧಿ ಅವರ ಹಿಂದುತ್ವದ ಬಗ್ಗೆ ನೀಡಿದ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ʻʻರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನು ಪ್ರದರ್ಶನ ಮಾಡಿದ್ದಾರೆ. ಪ್ರತಿಪಕ್ಷ ನಾಯಕನೆನ್ನುವ ಜವಾಬ್ದಾರಿ ಮರೆತಿದ್ದಾರೆʼʼ ಎಂದು ಟೀಕಿಸಿದರು.
ʻʻಹಿಂದುತ್ವ ಎಂದು ಹೇಳುವವರು ದ್ವೇಷ ಭಾವನೆ ಬಿತ್ತುವವರು ಎಂಬ ಆರೋಪ ಮಾಡಿದ್ದಾರೆ. ಹಿಂದೂ ಎನ್ನುವುದು ಸರ್ವೇ ಜನಾಃ ಸುಖಿನೋ ಭವಂತು ಎಂಬುದನ್ನು ಪ್ರತಿಪಾದಿಸಿದೆ. ಹಿಂದೂ ಎನ್ನುವುದು ವಿಶ್ವ ಒಂದು ಕುಟುಂಬ ಎಂದು ಭಾವಿಸುವುದು, ಹಿಂದೂ ಎನ್ನುವುದು ಅಣುರೇಣು ತೃಣ ಕಾಷ್ಟಗಳಲ್ಲೂ ಭಗವಂತನನ್ನು ಕಾಣುವುದು, ಹಿಂದೂ ಎಂದರೆ ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿ, ಪಕ್ಷಿಗಳೂ ಚೆನ್ನಾಗಿರಬೇಕೆಂದು ಪ್ರಾರ್ಥಿಸುವುದುʼʼ ಎಂದು ಹೇಳಿದರು.
ʻʻರಾಹುಲ್ ಅವರು ಚೊಚ್ಚಲ ಭಾಷಣದಲ್ಲಿಯೇ ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ. ನನಗೆ ಭಾರತ, ಭಾರತೀಯತೆ, ಹಿಂದೂ, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎನ್ನುವುದನ್ನು ಪ್ರದರ್ಶಿಸಿದ್ದಾರೆ. ಸಹಸ್ರಾರು ವರ್ಷದ ಸನಾತನ ಪರಂಪರಗೆ ಅಪಮಾನದ ಕೆಲಸ ಮಾಡಿರುವ ಅವರು ರಾಷ್ಟ್ರದ ಕ್ಷಮೆ ಯಾಚಿಸಬೇಕುʼʼ ಎಂದು ಸಿಟಿ ರವಿ ಒತ್ತಾಯಿಸಿದ್ದಾರೆ.