ಗೆದ್ದ, ಸೋತ ಅಭ್ಯರ್ಥಿಗಳ ಜತೆ ರಾಹುಲ್‌ ಗಾಂಧಿ ಚರ್ಚೆ; ಹೊಸ ಕಾರ್ಯಸೂಚಿಗೆ ಸಿಎಂಗೆ ಸೂಚನೆ
x

ಗೆದ್ದ, ಸೋತ ಅಭ್ಯರ್ಥಿಗಳ ಜತೆ ರಾಹುಲ್‌ ಗಾಂಧಿ ಚರ್ಚೆ; ಹೊಸ ಕಾರ್ಯಸೂಚಿಗೆ ಸಿಎಂಗೆ ಸೂಚನೆ


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಜತೆ ಪರಾಮರ್ಶನಾ ಸಭೆ ನಡೆಸಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವರ ಕ್ಷೇತ್ರಗಳಲ್ಲಿ ಯಾಕೆ ಸೋಲು ಅಥವಾ ಗೆಲುವು ಆಯಿತು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿ ಆ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ರಾಹುಲ್‌ ಗಾಂಧಿ ಅವರು ಕೆಲ ಸಚಿವರನ್ನು ಭೇಟಿ ಮಾಡಿ ಅವರವರ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಯಿತು ಎಂದು ಚರ್ಚೆ ಮಾಡಿದರು. ರಾಜ್ಯದಲ್ಲಿ ಇನ್ನೂ 5-6 ಸೀಟುಗಳು ಹೆಚ್ಚು ಬರುವ ನಿರೀಕ್ಷೆ ಇತ್ತು. ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು. ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಲ್ಲಿ ಸರಿಪಡಿಸಿಕೊಳ್ಳಬೇಕು. ಮತ್ತೆ ಜನರ ಬಳಿಗೆ ಹೋಗಬೇಕು ಎಂದು ರಾಹುಲ್‌ ಗಾಂಧಿ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದ್ದಾರೆ.

“ನೂತನ ಸಂಸದರು ಜನರ ಧ್ವನಿಯಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ಯಾರೆಲ್ಲ ಕಾಂಗ್ರೆಸ್ ಗೆ ಮತ ಹಾಕದವರ ಮನ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ಸಲಹೆ ನೀಡಿದರು. ಲೋಕಸಭೆಗೆ ಆಯ್ಕೆಯಾದ 9 ಸಂಸದರಿಗೆ ಅಭಿನಂದನೆ ಸಲ್ಲಿಸಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದೆಹಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಸಿಎಂ ರಾಜೀನಾಮೆ?

ರಾಹುಲ್ ಗಾಂಧಿ ಸಿಎಂ ರಾಜೀನಾಮೆ ಪಡೆಯಲು ಬಂದಿದ್ದಾರಾ ಎಂಬ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ನಿಗಮ ಮಂಡಳಿಗಳಲ್ಲಿ ಹಣ ದುರುಪಯೋಗ ಪ್ರಕರಣ ಈ ಹಿಂದೆಯೂ ಆಗಿದೆ. ಈಗ ಆತ್ಮಹತ್ಯೆಯಿಂದಾಗಿ ಪ್ರಕರಣ ಈಚೆ ಬಂದಿದೆ. ಬಿಜೆಪಿ ಅವಧಿಯಲ್ಲಿನ ಪ್ರಕರಣಗಳು ಇವೆ. ಸಚಿವರು ಈಗಾಗಲೇ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಸಚಿವರ ಜತೆ ಚರ್ಚೆ ಮಾಡಿದ್ದು, ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾವುದೇ ತನಿಖೆ ಬೇಕಾದರೂ ನಡೆಯಲಿ ಎಂದು ತಿಳಿಸಿದ್ದಾರೆ” ಎಂದರು.

ಸಿಬಿಐ ತನಿಖೆ ಆಗ್ರಹಿಸುವ ಬಗ್ಗೆ ಕೇಳಿದಾಗ, “ಈ ಪ್ರಕರಣವನ್ನು ನಾವು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ರಾಜ್ಯ ಸರ್ಕಾರದ ಅನುಮತಿ ಇಲ್ಲದಿದ್ದರೂ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ನಾವು ಅವರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ” ಎಂದರು.

ಜೆಡಿಯು ಹಾಗೂ ಟಿಡಿಪಿ ವಿಶೇಷ ಸ್ಥಾನಮಾನ ವಿಚಾರವಾಗಿ ಬೇಡಿಕೆ ಇಟ್ಟಿದ್ದು, ಇಂಡಿಯಾ ಮೈತ್ರಿಕೂಟ ಅವರ ಬೇಡಿಕೆಗೆ ಒಪ್ಪಿಗೆ ನೀಡುವುದೇ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ಈಗಾಗಲೇ ಆಂಧ್ರ ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಣೆ ಮಾಡಿದ್ದೆವು. ನಾವು ಕೊಟ್ಟಿರುವ ಮಾತಿಗೆ ನಾವು ಬದ್ಧರಾಗಿರುತ್ತೇವೆ. ಈಗ ಎನ್ ಡಿಎ ಸರ್ಕಾರ ರಚನೆಗೆ ಮುಂದಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೊ ಮಾಡಲಿ” ಎಂದರು.

ರಾಹುಲ್ ಗಾಂಧಿ ಅವರು 2 ಕ್ಷೇತ್ರದಲ್ಲಿ ಗೆದ್ದಿದ್ದು, ಯಾವ ಕ್ಷೇತ್ರ ಉಳಿಸಿಕೊಳ್ಳುತ್ತಾರೆ ಎಂದು ಕೇಳಿದಾಗ, “ಅವರು ಆ ಕ್ಷೇತ್ರದ ಜನರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಈ ತೀರ್ಮಾನ ಕೈಗೊಳ್ಳಲು ಇನ್ನು 10 ದಿನಗಳ ಕಾಲಾವಕಾಶವಿದೆ” ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಹಣ ಹಂಚಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಪರಿಷತ್ತಿನ ಆರು ಸ್ಥಾನಗಳ ಪೈಕಿ ನಾವು ಕೇವಲ 1 ಸ್ಥಾನ ಹೊಂದಿದ್ದೆವು. ಈಗ ನಾವು ಮೂರು ಕ್ಷೇತ್ರ ಗೆದ್ದಿದ್ದೇವೆ. ಅವರು ಗೆದ್ದಿರುವ ಮೂರು ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿ ಗೆದ್ದಿದ್ದಾರಾ? ಯಡಿಯೂರಪ್ಪನವರು 28 ಲೋಕಸಭಾ ಕ್ಷೇತ್ರವನ್ನು ಗೆದ್ದು ಬಿಜೆಪಿ ನಾಯಕರ ಜೇಬಿಗೆ ಹಾಕುವುದಾಗಿ ಹೇಳಿದ್ದರಲ್ಲವೇ ಅದೇ ರೀತಿ ನಾವು ಪರಿಷತ್ತಿನ ಆರೂ ಸ್ಥಾನ ಗೆಲ್ಲುತ್ತೇವೆ ಎಂದಿದ್ದೆವು. ಅದರಲ್ಲಿ ಮೂರು ಸ್ಥಾನ ಗೆದ್ದಿದ್ದೇವೆ” ಎಂದು ತಿರುಗೇಟು ನೀಡಿದರು.

Read More
Next Story