ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್
ಇದೇ ಡಿಸೆಂಬರ್ 5ಕ್ಕೆ ಹಾಸನದಲ್ಲಿ ಆಯೋಜಿಸಲಾಗಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು.ಅನುಮತಿ ನೀಡಬಾರದೆಂದೂ ಒತ್ತಾಯವಿತ್ತು.
ರಾಜಕೀಯ ಸವಾಲುಗಳು ಎದುರಾದಾಗಲೆಲ್ಲಾ ತಮಗಿರುವ ಜನಬೆಂಬಲವನ್ನು ತೋರಿಸಿ ಚಾಣಾಕ್ಷ ತಂತ್ರಗಾರಿ ತೋರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಮ್ಮೆ ಅಂಥದ್ದೇ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ಮುಡಾ, ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ನಡೆಯುತ್ತಿರುವಾಗ ರಾಜಕೀಯ ಎದುರಾಳಿಗಳಿಗೆ ʼಸ್ವಾಭಿಮಾನಿ ಜನಾಂದೋಲನ ಸಮಾವೇಶʼದ ಮೂಲಕ ಉತ್ತರ ಕೊಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ.
ದೆಹಲಿ ಭೇಟಿ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಮಾವೇಶಕ್ಕೆ ಒಪ್ಪಿಗೆ ನೀಡಿದ್ದಾರೆ. ಇಬ್ಬರೂ ನಾಯಕರನ್ನು ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನ ನೀಡಲಾಗಿದ್ದು, ಅವ ಭಾಗವಹಿಸುವಿಕೆ ಬಗ್ಗೆ ಇನ್ನಷ್ಟೇ ಖಚಿತತೆ ದೊರಕಬೇಕಿದೆ ಎಂದು ಮೂಲಗಳು ತಿಳಿಸಿವೆ.
ಆ ಮೂಲಕ ಡಿಸೆಂಬರ್ 9ಕ್ಕೆ ಬೆಳಗಾವಿಯಲ್ಲಿ ಅರಂಭವಾಗಲಿರುವ ಚಳಿಗಾಲದ ಅಧಿವೇಶನವನ್ನು ಪಕ್ಷ ಎದುರಿಸಲು ಸಹಾಯವಾಗುತ್ತದೆ , ಹಾಗೂ ಮುಡಾ, ವಕ್ಫ್ , ಬಿಪಿಎಲ್, ವಾಲ್ಮೀಕಿ ನಿಗಮ ಹಗರಣ ಮತ್ತಿತರ ವಿವಾದಗಳನ್ನು ಸದನದಲ್ಲಿ ಎದುರಿಸಲು ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಬಣದ ನಾಯಕರೊಬ್ಬರು ತಿಳಿಸಿದ್ದಾರೆ.
ಆದರೆ, ಇದೇ ಡಿಸೆಂಬರ್ 5ಕ್ಕೆ ಹಾಸನದಲ್ಲಿ ಆಯೋಜಿಸಲಾಗಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ರೀತಿ ಸಮಾವೇಶ ಮಾಡಲು ಅನುಮತಿ ಕೊಡಬಾರದು ಎಂದು ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರೋಧಿ ಬಣದವರೆನ್ನಲಾದ ಕಾರ್ಯಕರ್ತರು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ಆ ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಿದ್ದರಾಮಯ್ಯ ಅವರಂತೆಯೇ ಪಕ್ಷದ ಬೇರೆ ಬೇರೆ ನಾಯಕರೂ ಸಹ ಮುಂದಿನ ದಿನಗಳಲ್ಲಿ ಇದೇ ರೀತಿ ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶವಿದೆ. ಹಾಗಾದರೆ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು? ಎಂದು ಹೈಕಮಾಂಡ್ ಮುಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಎನ್ನಲಾದ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನೆ ಎತ್ತಿದ್ದಾರೆ. ಅದನ್ನೂ ಹೈಕಮಾಂಡ್ ಗಮನಕ್ಕೆ ಪತ್ರ ಮುಖೇನ ತಂದಿದ್ದರು.
ಪಕ್ಷದ ಕಚೇರಿಯಲ್ಲಿ ಪಕ್ಷದ ನಾಯಕರೇ ಸಮಾವೇಶದ ರೂಪುರೇಷೆ ಮಾಡುತ್ತಿದ್ದಾರೆ. ಆದರೆ ಪಕ್ಷದ ಚಿಹ್ನೆ ಮಾತ್ರ ಅವರಿಗೆ ಬೇಡವಾಗಿದೆ. 2022 ರಲ್ಲಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಪಕ್ಷವನ್ನು ದೂರವಿಟ್ಟು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಕೊನೆಗೆ ಪಕ್ಷವೇ ಅವರ ಬಳಿ ಬರುವಂತೆ ಮಾಡಿಕೊಂಡಿದ್ದರು.. ಮತ್ತೆ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆಂದು ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದರು. ಈ ಎಲ್ಲದರ ಮಧ್ಯೆ ಶುಕ್ರವಾರ ದೆಹಲಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಸಿದ್ದರಾಮಯ್ಯ ಸಮಾವೇಶಕ್ಕೆ ಅನುಮತಿ ಪಡೆದುಕೊಂಡಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಜನಾಂದೋಲನ ಸಮಾವೇಶ ವಿಚಾರ ದೆಹಲಿ ಹೈಕಮಾಂಡ್ ಅಂಗಳ ತಲುಪಿತ್ತು. ಜನಾಂದೋಲನ ಸಮಾವೇಶದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ದೂರು ಸಲ್ಲಿದ್ದರು. ಸಮಾವೇಶ ಮಾಡುವುದಾದಲ್ಲಿ ಪಕ್ಷದ ಚಿಹ್ನೆ ಅಡಿಯೇ ಮಾಡಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದರು. ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷರಿಗೆ ದೂರು ನೀಡಿರುವ ಕಾರ್ಯಕರ್ತರು ಹಲವು ವಿಚಾರಗಳನ್ನು ಪ್ರಸ್ತಾಪಿಸಿರುವುದು ಗಮನ ಸೆಳೆದಿತ್ತು.
ಹಾಸನದಲ್ಲಿ ನಡೆಯಲಿರುವ ಸಮಾವೇಶದ ಭಿತ್ತಿಪತ್ರಗಳನ್ನು, ಪೋಸ್ಟರ್‌ಗಳನ್ನು ಮೈಸೂರಿನಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದರು. ಆ ಪೋಸ್ಟರ್‌ಗಳ ಸಮೇತ ದೂರು ಸಲ್ಲಿಕೆಯಾಗಿದೆ ಎಂಬ ಮಾಹಿತಿಯಿದೆ. ಜೊತೆಗೆ ಸಮಾವೇಶ ನಡೆಯುವ ಸ್ಥಳದ ವೀಕ್ಷಣೆ ಮಾಡಿದ್ದ ಸಚಿವರಾದ ಕೆ.ಎನ್. ರಾಜಣ್ಣ, ವೆಂಕಟೇಶ್, ಎಚ್.ಸಿ. ಮಹದೇವಪ್ಪ, ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರುಗಳ ಫೋಟೋ ಹಾಗೂ ವಿಡಿಯೋಗಳನ್ನೂ ದೂರಿನೊಂದಿಗೆ ಸಲ್ಲಿಸಿದ್ದರು. ಇದಲ್ಲದೆ ಸಮಾವೇಶಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ.
ಪಕ್ಷದ ಬಂಬಲವಿಟ್ಟುಕೊಂಡೇ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಎದುರಿಸಲು ಈ ಸಮಾವೇಶ ಅಗತ್ಯವಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಜತೆಗೆ ನಿಂತಿರುವ ಅಹಿಂಧ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ವರ್ಗಗಳನ್ನು ಕಾಂಗ್ರೆಸ್ ಜತೆಯಾಗಿ ಇಟ್ಟುಕೊಳ್ಳುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ಅವರ ಬೆಂಬಲಿಗರು ವಾದಿಸಿದ್ದಾರೆ. ವಿಧಾನಸಭಾ ಚುನಾವಣಾ ಪೂರ್ವ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಬುನಾದಿ ಭದ್ರವಾಗಿತ್ತು. ಅದೇ ರೀತಿ ಹಾಸನ ಭಾಗದ ಈ ಕಾರ್ಯಕ್ರಮ ಹಾಸನ ಸೇರಿದಂತೆ ಸುತ್ತುಮುತ್ತಲಿನ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲಿದೆ ಎಂಬುದು ಇನ್ನೊಂದು ವಾದ.
ಜತೆಗೆ, ಈ ಮೂಲಕ ಮುಡಾ ಮತ್ತಿತರ ಪ್ರಕರಣಗಳನ್ನು ನಾಜೂಕಾಗಿ ಎದುರಿಸಲು ಈ ತಂತ್ರ ಹೆಣೆಯಲಾಗಿದೆ ಎಂದೂ ಹೇಳಲಾಗಿದೆ.
ಪಕ್ಷ ಸಮಾವೇಶದಲ್ಲಿ ಭಾಗವಹಿಸಲಿದೆ: ಡಿ.ಕೆ. ಶಿವಕುಮಾರ್
ಇನ್ನು ಇದೇ ವಿಚಾರಕ್ಕೆ ದೆಹಲಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಸಮಾವೇಶದಲ್ಲಿ ಪಕ್ಷದ ಭಾಗವಹಿಸುವಿಕೆ ಖಂಡಿವಾಗಿಯೂ ಇದ್ದೇ ಇರುತ್ತದೆ. ಆದರೆ ದೂರಿನ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಸಮಾವೇಶವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಅವರು ನನಗೆ ಮೊದಲೇ ತಿಳಿಸಿದ್ದಾರೆ. ಮಿಕ್ಕ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿ ಮಾಡಿ ಮೂರು ನಾಲ್ಕು ದಿನಗಳಾಗಿವೆ’ ಎಂದಿದ್ದಾರೆ.
ಹಾವೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ‘ಯಾವ ಪತ್ರ, ಯಾರು ಬರೆದಿದ್ದು, ವಾಟ್ಸ್ಆ್ಯಪ್ನಲ್ಲಿ ಹರಿದಾಡುವ ಪತ್ರ ಪಕ್ಷದ ನಿರ್ಧಾರವಾಗುವುದಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸೇರಿಯೇ ಸಮಾವೇಶ ಪ್ಲ್ಯಾನ್ ಮಾಡಿದ್ದಾರೆ’ ಎಂದಿದ್ದಾರೆ.
ಸಿದ್ದರಾಮೋತ್ಸವಕ್ಕೂ ಎದುರಾಗಿದ್ದ ವಿರೋಧ
ಈ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಪ್ರತ್ಯೇಕ ಸಮಾವೇಶ ನಡೆಸಲು ಸಿದ್ದರಾಮಯ್ಯರಿಗೆ ಅವಕಾಶ ಕೊಡಬಾರದು ಎಂದು ಹೈಕಮಾಂಡ್‌ಗೆ ಆಗಲೂ ದೂರು ಸಲ್ಲಿಸಲಾಗಿತ್ತು. ಆದರೆ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸಿದ್ದರು.
ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದರಿಂದ ಆಗ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಾತ್ಯತೀತ ಜನತಾದಳದಿಂದ ಹೊರಗೆ ಬರುವಂತಾಗಿತ್ತು. ಅದಾದ ಬಳಿಕ ತುಮಕೂರಿನಲ್ಲಿ ಎರಡನೇ ಅಹಿಂದ ಸಮಾವೇಶ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಹಿಂದ ಸಮುದಾಯದ ಬೆಂಬಲ ಇರುವುದು ಚುನಾವಣೆಗಳಲ್ಲಿ ಮತಗಳಾಗಿ ಬದಲಾಗುವುದು ರಾಜಕೀಯ ನಾಯಕರಿಗೆ ತಿಳಿಯದಿರುವ ವಿಚಾರವಲ್ಲ. ಹೀಗಾಗಿ ಕಾಂಗ್ರೆಸ್ ಮಾತ್ರವಲ್ಲದೇ ಉಳಿದ ರಾಜಕೀಯ ಪಕ್ಷಗಳು ಕೂಡ ಸಿದ್ದರಾಮಯ್ಯಗಿರುವ ಅಹಿಂದ ಬೆಂಬಲದ ಕುರಿತು ಹೆಚ್ಚು ಮಾತನಾಡುವುದಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಕೊಟ್ಟಿದ್ದ ದೂರಿನಲ್ಲಿ ಏನಿತ್ತು?
• ಪಕ್ಷದ ಚಿಹ್ನೆಯ ಜೊತೆ ಕಾರ್ಯಕ್ರಮವನ್ನು ಮಾಡಿದ್ದರೆ ಪಕ್ಷಕ್ಕೆ ಮತ್ತಷ್ಟು ಬಲಬಂದಂತೆ ಆಗುತ್ತಿತ್ತು.
• ಇದೇ ಡಿಸೆಂಬರ್ 5 ರಂದು ಹಾಸನದಲ್ಲಿ ಸ್ವಾಭಿಮಾನಿಗಳ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ.
• ತಮಗೆ ಅಧಿಕಾರ ಕೊಟ್ಟಿರುವ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ದೂರವಿಟ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
• ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಕೆಲವು ಮಂತ್ರಿಗಳು ಹಾಗೂ ಶಾಸಕರುಗಳು ಉಸ್ತುವಾರಿ ತೆಗೆದುಕೊಂಡಿದ್ದಾರೆ.
• ಬೇರೆ ಬೇರೆ ನಾಯಕರಗಳು ಸಹ ಇದೇ ರೀತಿ ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ದುರುಪಯೋಗಪಡಿಸಿಕೊಂಡರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು?
• ಕಾರ್ಯಕ್ರಮದ ಎಲ್ಲಾ ರೂಪುರೇಷೆಗಳನ್ನ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಕಚೇರಿಯಲ್ಲಿ ಮಾಡುತ್ತಾರೆ.
• ಆದರೆ ಕಾರ್ಯಕ್ರಮಕ್ಕೆ ಮಾತ್ರ ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸುತ್ತಿಲ್ಲ.
• ಕಾಂಗ್ರೆಸ್ ಚಿಹ್ನೆ ಮಾತ್ರ ಯಾಕೆ ಬೇಡ? ಎಂಬುದು ಕಾರ್ಯಕರ್ತರ ಪ್ರಶ್ನೆ.
• ಈ ಬಗ್ಗೆ ಸೂಕ್ಷ್ಮವಾಗಿ ಮತ್ತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು.
• ಸ್ವಾರ್ಥವಿಲ್ಲದೆ ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.
• ಸಚಿವರಿಗೆ ಶಾಸಕರುಗಳಿಗೆ ತಿಳಿ ಹೇಳಿ ಪಕ್ಷದ ಚಿಹ್ನೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ದೇಶನ ನೀಡಬೇಕು .