
ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್
ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ
ಭಾರತದ ತಂಡದ ಕೋಚ್ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಐಪಿಎಲ್ 2025ಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೇರಿಕೊಂಡಿದ್ದರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾದ ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಫ್ರಾಂಚೈಸಿ ಶನಿವಾರ (ಆಗಸ್ಟ್ 30) ಪ್ರಕಟಿಸಿದೆ.
ಫ್ರಾಂಚೈಸಿಯು ದ್ರಾವಿಡ್ ಅವರಿಗೆ ಉನ್ನತ ಹುದ್ದೆಯನ್ನು ನೀಡಲು ಮುಂದಾಗಿತ್ತು, ಆದರೆ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
"ಹಲವು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ಪಯಣದಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವವು ಯುವ ಆಟಗಾರರ ಪೀಳಿಗೆಯ ಮೇಲೆ ಪ್ರಭಾವ ಬೀರಿದೆ, ತಂಡದಲ್ಲಿ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ರಾಹುಲ್ ಅವರ ಗಮನಾರ್ಹ ಸೇವೆಗಾಗಿ ರಾಜಸ್ಥಾನ್ ರಾಯಲ್ಸ್, ಅದರ ಆಟಗಾರರು ಮತ್ತು ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾರೆ " ಎಂದು ರಾಜಸ್ಥಾನ್ ರಾಯಲ್ಸ್ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
2024ರಲ್ಲಿ ಭಾರತ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಮುನ್ನಡೆಸಿದ್ದ ದ್ರಾವಿಡ್, ರಾಷ್ಟ್ರೀಯ ತಂಡದೊಂದಿಗಿನ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಐಪಿಎಲ್ 2025ಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೇರಿಕೊಂಡಿದ್ದರು. ಆದರೆ, ಈ ಬಾರಿಯ ಐಪಿಎಲ್ ಋತುವಿನಲ್ಲಿ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. 10 ತಂಡಗಳಿದ್ದ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.