Development in the state is hampered due to the struggle for the CM-DCM chair: R. Ashok attacks
x

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಸಿಎಂ-ಡಿಸಿಎಂ ಮಧ್ಯೆ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿ ಕುಂಠಿತ; ಆರ್‌.ಅಶೋಕ್‌ ವಾಗ್ದಾಳಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿಗೆ ರಾಜ್ಯದ ಬಿಕ್ಕಟ್ಟನ್ನು ಬಗೆಹರಿಸುವ ಸಾಮರ್ಥ್ಯವಿಲ್ಲ. ಇದಕ್ಕೆ ಖರ್ಗೆ ಅವರ ಅಸಹಾಯಕ ಮಾತುಗಳೇ ಸಾಕ್ಷಿ ಎಂದು ಆರ್‌. ಅಶೋಕ್‌ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ನಾಯಕತ್ವದ ಗೊಂದಲ ಬಗೆಹರಿಸಲು ಹೈಕಮಾಂಡ್‌ಗೆ ಸಾಮರ್ಥ್ಯವಿಲ್ಲ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ಕುರ್ಚಿ ಕಿತ್ತಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್‌) ಸೋಮವಾರ (ಡಿ.22) ಪ್ರತಿಕ್ರಿಯಿಸಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿಗೆ ರಾಜ್ಯದ ಬಿಕ್ಕಟ್ಟನ್ನು ಬಗೆಹರಿಸುವ ಸಾಮರ್ಥ್ಯವಿಲ್ಲ. ಇದಕ್ಕೆ ಖರ್ಗೆ ಅವರ ಅಸಹಾಯಕ ಮಾತುಗಳೇ ಸಾಕ್ಷಿ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಬಯಸುವವರೆಗೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪದೇ ಪದೇ ಪುನರುಚ್ಚಾರ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್‌, ಹೈಕಮಾಂಡ್ ಬಳಿ ಒಪ್ಪಂದವಾಗಿದೆ. ಅಧಿಕಾರ ಹಂಚಿಕೆಯು ದೆಹಲಿಯಲ್ಲಿ ಐದಾರು ನಾಯಕರ ನಡುವೆ ನಡೆದಿರುವ "ಗುಟ್ಟಿನ ವ್ಯಾಪಾರ" ಎಂದು ಹೇಳುತ್ತಾ ತಮ್ಮ ಕನಸು ನೆರವೇರಿಸಿಕೊಳ್ಳಲು ದೇವಾಲಯಗಳಿಗೆ ಸುತ್ತುತ್ತಿದ್ದಾರೆ. ಆದರೆ ಹೈಕಮಾಂಡ್, ಇದು ರಾಜ್ಯ ಮಟ್ಟದಲ್ಲಿ ಸೃಷ್ಟಿ ಆಗಿರುವ ಗೊಂದಲ, ನೀವೇ ಬಗೆಹರಿಸಿಕೊಳ್ಳಿ ಎಂದು ಜಾರಿಕೊಳ್ಳುತ್ತಿದೆ ಎಂದು ತಮ್ಮ ಸಂದೇಶದಲ್ಲಿ ಕಾಂಗ್ರೆಸ್‌ ಕಾಲೆಳೆದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ?

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಉಂಟಾಗಿರುವ ಗೊಂದಲಕ್ಕೆ ಭಾನುವಾರ(ಡಿ.21) ಪ್ರತಿಕ್ರಿಯಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಇದು ರಾಜ್ಯಮಟ್ಟದಲ್ಲಿ ಸೃಷ್ಟಿಯಾಗಿರುವ ಗೊಂದಲವಾಗಿದ್ದು, ರಾಜ್ಯದ ನಾಯಕರೇ ಬಗೆಹರಿಸಿಕೊಂಡು ತೀರ್ಮಾನ ಕೈಗೊಂಡು ಬನ್ನಿ ನಾವು ಅದನ್ನ ಬಗೆಹರಿಸುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸಿತ್ತು.

Read More
Next Story