ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ: ಆರ್‌ ಅಶೋಕ್‌|  ಅಪ್ರಾಪ್ತರನ್ನು ಜೈಲಿನಲ್ಲಿ ಇಡಲಾಗುವುದಿಲ್ಲ: ಕಾಂಗ್ರೆಸ್‌ ತಿರುಗೇಟು
x

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ: ಆರ್‌ ಅಶೋಕ್‌| ಅಪ್ರಾಪ್ತರನ್ನು ಜೈಲಿನಲ್ಲಿ ಇಡಲಾಗುವುದಿಲ್ಲ: ಕಾಂಗ್ರೆಸ್‌ ತಿರುಗೇಟು


ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಜನರ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಗೆ ಇದೀಗ 50 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆರ್‌ ಅಶೋಕ್‌ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಒಂದು ತಿಂಗಳು ಜೈಲುವಾಸ ಅನುಭವಿಸಿದೆ, ನನ್ನನ್ನು ಬಂಧಿಯಾಗಿ ಮಾಡಿದ್ದ ಬ್ಯಾರಕ್ ಇನ್ನೂ ಉಳಿದಿದೆ ಎಂದು ಹೇಳಿದರು. ಈ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ʻʻತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಒಂದು ತಿಂಗಳು ಜೈಲುವಾಸ ಅನುಭವಿಸಿದೆ ಎಂದು ಆರ್‌ ಅಶೋಕ್‌ ಅವರು ಹೇಳುತ್ತಾರೆ, ಆದರೆ ಈ ಸಂದರ್ಭದಲ್ಲಿ ಅವರು ಪ್ರಥಮ ಪಿಯು ಓದುವ ವಿದ್ಯಾರ್ಥಿಯಾಗಿದ್ದು, ಅವರಿಗೆ 16 ವರ್ಷ ಪ್ರಾಯವಾಗಿತ್ತು. ಹೀಗಿದ್ದಾಗ ಅಪ್ರಾಪ್ತ ರನ್ನು ಜೈಲಿನಲ್ಲಿ ಇಡಲು ದೇಶದ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲʼʼ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ʻʻ1975ರಲ್ಲಿ ದೇಶದ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು. ಪಾರ್ಲಿಮೆಂಟಿನ ಜಂಟಿ ಸಮಿತಿಯ ಬೆಂಗಳೂರಿನ ಸಭೆಗೆ ಆಗಮಿಸಿದ್ದ ಅಂದಿನ ಜನಸಂಘದ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಎಲ್.ಕೆ.ಅಡ್ವಾಣಿ ಸಹಿತವಾಗಿ 29 ಲೋಕಸಭಾ ಸದಸ್ಯರನ್ನು ತುರ್ತುಪರಿಸ್ಥಿತಿಯ ಘೋಷಣೆಯ ಕಾರಣಕ್ಕಾಗಿ ಬಂಧಿಸಲಾಗಿತ್ತು. ಆದರೆ ಜನ ಸಂಘದಿಂದ ಬಿಜೆಪಿಯಾಗಿ ಪರಿವರ್ತನೆಗೊಂಡಿರುವ ಬಿಜೆಪಿಗರು ಮಾತ್ರ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ದೇಶದಲ್ಲಿ ಇಂದು ಇರುವ ಅಘೋಷಿತ ಪರಿಸ್ಥಿತಿ ಮತ್ತು ಏಕ ವ್ಯಕ್ತಿಯ ಸರ್ವಾಧಿಕಾರ, ವ್ಯಕ್ತಿ ಪೂಜೆ ಬಿಜೆಪಿಗೆ ಅನಿವಾರ್ಯವಾಗಿದೆʼʼ ಎಂದು ಕಿಡಿಕಾರಿದರು.

ʻʻಕರ್ನಾಟಕ ವಿಧಾನ ಸಭೆಯ ಅನಿವಾರ್ಯದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು ರಾಹುಲ್ ಗಾಂಧಿ ರಾಮಲೀಲಾ ಮೈದಾನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಜನರ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಬಹುತೇಕ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸಿ ಬೆತ್ತಲೆಯಾಗುತ್ತಾರೆ. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ ರವರು ಅಂದಿನ ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಭಾರತದ ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾದವುʼʼ ಎಂದು ಹೇಳಿದ್ದಾರೆ.

ʻʻಅದೇ ಸಂದರ್ಭದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲ ಎಂದು ನಾನು ಹೇಳಲು ಆಗುವುದಿಲ್ಲ ಎಂದು ಹೇಳಿರುತ್ತಾರೆ. ಬಿಜೆಪಿಯ ಹಿರಿಯ ನಾಯಕರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿʼʼ ಎಂದು ವ್ಯಂಗ್ಯವಾಡಿದ್ದಾರೆ.

ʻʻಸ್ವಾತಂತ್ರ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸಿದ ಪೋಸ್ಟರ್ ಅಭಿಯಾನದ ಬದಲು ಬಿಜೆಪಿಗರು ತಮ್ಮ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಮೋದಿ ವ್ಯಕ್ತಿ ಪೂಜೆಯ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಬಹುದಿತ್ತು. ಆರ್ ಅಶೋಕ್ ಅವರಿಗೆ ಪೋಸ್ಟರ್ ಗಳ ಅವಶ್ಯಕತೆ ಇದ್ದಲ್ಲಿ ಕಾಂಗ್ರೆಸ್ ಪಕ್ಷ ಉಚಿತವಾಗಿ ಪೂರೈಕೆ ಮಾಡುತ್ತಿತ್ತುʼʼ ಎಂದು ಕಾಲೆಳೆದಿದ್ದಾರೆ.

ʻʻತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾನು ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದೆ ಮತ್ತು ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಪ್ರಥಮ ಪಿಯು ಓದುವ 16 ವರ್ಷದ ಅಪ್ರಾಪ್ತ ರನ್ನು ಜೈಲಿನಲ್ಲಿ ಇಡಲು ದೇಶದ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ! ಇಂತಹ ಹಸಿ ಸುಳ್ಳುಗಳ ಮೂಲಕವೇ ಬಿಜೆಪಿಗರು ರಾತ್ರೊರಾತ್ರಿ ನಾಯಕರಾಗಿರುತ್ತಾರೆʼʼ ಎಂದು ವ್ಯಂಗ್ಯವಾಡಿದ್ದಾರೆ.

ʻʻಸಂವಿಧಾನವನ್ನು ಉಲ್ಲಂಘನೆ ಮಾಡಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಯಲ್ಲಿ ಇಟ್ಟಿರುವ ಭಾರತೀಯ ಜನತಾ ಪಕ್ಷವಾಗಲಿ ಅಥವಾ ಅದರ ನಾಯಕರಾಗಲಿ 1975ರ ತುರ್ತು ಪರಿಸ್ಥಿತಿಯ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ವಿಫಲರಾಗಿರುವ ಆರ್. ಅಶೋಕ್ ರವರು ತಮ್ಮ ರಾಜಕೀಯ ಚಟಕ್ಕಾಗಿ ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆʼʼ ಎಂದು ರಮೇಶ್‌ ಬಾಬು ಅವರು ಆರೋಪಿಸಿದ್ದಾರೆ.

Read More
Next Story