
ಕೆಪಿಎಸ್‌ಸಿಗೆ ಪತ್ರ ಬರೆದಿರುವ ಅಭ್ಯರ್ಥಿಗಳು.
ಕೆಎಎಸ್ ಮುಖ್ಯಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಯ ಬಂಡಲ್ ಓಪನ್ ? ಅಭ್ಯರ್ಥಿಗಳಿಂದ ದೂರು
ಪ್ರಶ್ನೆಪತ್ರಿಕೆ ಬಂಡಲ್ ಓಪನ್ ಆಗಿರುವ ಸುದ್ದಿ ತಿಳಿದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನಿರಾಕರಿಸಿದ್ದು, ಪ್ರಶ್ನಿಸಿದ ಅಭ್ಯರ್ಥಿಗಳ ಮೇಲೆ ಕೆಪಿಎಸ್‌ಸಿ ಸದಸ್ಯರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕರ್ನಾಟಕ ಲೋಕಸೇವಾ ಆಯೋಗ ತನ್ನ ತಪ್ಪುಗಳಿಂದಲೇ ಸದಾ ಸುದ್ದಿಯಲ್ಲಿದೆ. ಅಂತೆಯೇ ಕೆಪಿಎಸ್‌ಸಿ ನಡೆಸುತ್ತಿರುವ ಗೆಜೆಟೆಡ್ ಪ್ರೊಬೇಷನರಿ ಮುಖ್ಯಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಬಂಡಲ್ ಅವಧಿಗೆ ಮೊದಲೇ ಮೊದಲೇ ತೆರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಕಾಂಕ್ಷಿಗಳು ಈ ಆರೋಪ ಮಾಡಿದ್ದು, ಆಯೋಗಕ್ಕೆ ದೂರು ನೀಡಿದ್ದಾರೆ.
ಕೆಪಿಎಸ್‌ಸಿ ಮೇ 3ರಿಂದ 9 ರವರೆಗೆ ಮುಖ್ಯಪರೀಕ್ಷೆ ನಿಗದಿಪಡಿಸಿತ್ತು. ಸೋಮವಾರ (ಮೇ5) ತಲಾ 125 ಅಂಕಗಳ ಎರಡು ಪ್ರಶ್ನೆಗಳನ್ನೊಳಗೊಂಡ ಪ್ರಬಂಧ ಪತ್ರಿಕೆಯ ಪರೀಕ್ಷೆ ನಡೆದಿದೆ. ಮೈಸೂರು ರಸ್ತೆಯ ಕಸ್ತೂರಬಾ ನಗರದ ಬಿಬಿಎಂಪಿ ಸಂಯುಕ್ತ ಪಿಯು ಕಾಲೇಜಿನ ಕೊಠಡಿ ಸಂಖ್ಯೆ ನಾಲ್ಕರಲ್ಲಿ ಪ್ರಶ್ನೆಪತ್ರಿಕೆ ಬಂಡಲ್ ಮೊದಲೇ ಓಪನ್ ಆಗಿರುವುದನ್ನು ಗುರುತಿಸಿದ ಅಭ್ಯರ್ಥಿಗಳು ಈ ಕುರಿತು ದೂರು ಬರೆದಿದ್ದು ಅದಕ್ಕೆ ಅದಕ್ಕೆ ಆ ಕಾಲೇಜಿನ ಪ್ರಾಂಶುಪಾಲರು ಸ್ವೀಕೃತಿ ಮೊಹರು ಹಾಕಿದ್ದಾರೆ.
ಪ್ರಶ್ನೆಪತ್ರಿಕೆ ಬಂಡಲ್ ಓಪನ್ ಆಗಿರುವ ಸುದ್ದಿ ತಿಳಿದ ಅಭ್ಯರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಪ್ರಶ್ನಿಸಿ ಪರೀಕ್ಷೆ ಬರೆಯಲು ನಿರಾಕರಿಸಿದರು. ನಡೆದಿದೆ ಎನ್ನಲಾದ ಅಕ್ರಮವನ್ನು ಪ್ರಶ್ನಿಸಿದ ಅಭ್ಯರ್ಥಿಗಳ ಮೇಲೆ ಕೆಪಿಎಸ್‌ಸಿ ಸದಸ್ಯರು ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪವೂ ಕೇಳಿ ಬಂದಿದೆ. ಈ ಘಟನೆ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಭ್ಯರ್ಥಿಗಳು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಿ ಇರುವ ಪತ್ರ ರವಾನಿಸಿದ್ದಾರೆ.
ಹೈಕೋರ್ಟ್ ಹಾಗೂ ಕೆಎಟಿಯಿಂದ ಆದೇಶ ಪಡೆದು ಮುಖ್ಯಪರೀಕ್ಷೆಗೆ ಅವಕಾಶ ಪಡೆದಿದ್ದ ಅಭ್ಯರ್ಥಿಗಳಿಗೆ ಶುಕ್ರವಾರ (ಮೇ2)ರ ಮಧ್ಯರಾತ್ರಿಯವರೆಗೂ ಅರ್ಜಿ ಆಹ್ವಾನಿಸಿ ಪ್ರವೇಶಪತ್ರಗಳನ್ನು ನೀಡಿದ್ದ ಕಪಿಎಸ್ಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗುವುದರೊಂದಿಗೆ ಅಭ್ಯರ್ಥಿಗಳ ಭವಿಷ್ಯದ ಜತೆಗೆ ಕೆಪಿಎಸ್‌ಸಿ ಮತ್ತೊಮ್ಮೆ ಚೆಲ್ಲಾಟವಾಡಿದೆ.