QR code stickers for lawyers vehicles from August 15
x

ಸಾಂದರ್ಭಿಕ ಚಿತ್ರ

ವಕೀಲರ ವಾಹನಗಳಿಗೆ ಕ್ಯೂಆರ್‌ ಕೋಡ್‌ ಸ್ಟಿಕ್ಕರ್; ಸ್ಕಾನ್‌ ಮಾಡಿದರೆ ವಕೀಲರ ವಿವರ ಬಹಿರಂಗ

ವಕೀಲರಲ್ಲದವರು ಸ್ಟಿಕ್ಕರ್‌ ಬಳಸಿದರೆ ಇ-ಮೇಲ್‌ ಮೂಲಕ ದೂರು ನೀಡಲು ರಾಜ್ಯ ವಕೀಲರ ಪರಿಷತ್‌ ಇತ್ತೀಚೆಗೆ ಮನವಿ ಮಾಡಿತ್ತು. ವಕೀಲರು ಎಂದು ಹೇಳಿಕೊಂಡು ಅಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ದೂರುಗಳು ಬಂದ ಕಾರಣ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ ನೀಡಲು ತೀರ್ಮಾನಿಸಲಾಗಿದೆ.


ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಸ್ಟಿಕ್ಕರ್‌ ಅಂಟಿಸಿಕೊಂಡು ಅಕ್ರಮಗಳಲ್ಲಿ ಭಾಗಿಯಾಗುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ವಕೀಲರ ಪರಿಷತ್ತಿನಿಂದ ತನ್ನ ಸದಸ್ಯರಿಗೆ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ ವಿತರಿಸಲು ನಿರ್ಧರಿಸಲಾಗಿದೆ.

ವಕೀಲರಲ್ಲದೇ ಹೋದರೂ ಸ್ಟಿಕ್ಕರ್‌ ಬಳಸುತ್ತಿರುವ ಬಗ್ಗೆ ಇ-ಮೇಲ್‌ ಮೂಲಕ ದೂರುಗಳು ಬಂದಿದ್ದವು. ಈ ಹಿನ್ನೆಲೆ ದೂರು ನೀಡುವಂತೆ ವಕೀಲರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಆ ಕಾರಣಕ್ಕಾಗಿ ಪರಿಷತ್‌ ವತಿಯಿಂದಲೇ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ ವಿತರಿಸಲಾಗುತ್ತಿದೆ ಎಂದು ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ ತಿಳಿಸಿದ್ದಾರೆ.

ಅನಧಿಕೃತವಾಗಿ ವಾಹನಗಳ ಮೇಲೆ ಸ್ಟಿಕ್ಕರ್‌ ಹಾಕಿಕೊಂಡರೆ ಪೊಲೀಸರಿಗೆ ದೂರು ನೀಡಲಾಗುವುದು. ಹೊಸ ವಿನ್ಯಾಸ ಸ್ಟಿಕ್ಕರ್‌ಗಳನ್ನು ಆಗಸ್ಟ್‌ 15ರಿಂದ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಕ್ಯೂ ಆರ್‌ ಕೋಡ್‌ ವಿಶೇಷತೆ

ವಕೀಲರ ಪರಿಷತ್‌ ನೀಡುವ ಕ್ಯೂರ್‌ ಕೋಡ್‌ ಸ್ಟಿಕ್ಕರ್‌ ಅನ್ನು ಸ್ಕಾನ್‌ ಮಾಡಿದರೆ ವಕೀಲರ ಹೆಸರು, ಪೋಟೋ, ವಾಹನ ಸಂಖ್ಯೆ, ವಿಳಾಸ, ಇ-ಮೇಲ್‌ ವಿಳಾಸ, ರಕ್ತದ ಗುಂಪು, ಮೊಬೈಲ್‌ ಸಂಖ್ಯೆ, ವಕೀಲರ ಪರಿಷತ್‌ ಲೋಗೋ, ವಕೀಲರ ಸನ್ನದು ನೋಂದಣಿ ಸಂಖ್ಯೆ, ಅದರ ನೋಂದಣಿ ದಿನಾಂಕ, ಕಾನೂನು ಪದವಿ ಪಡೆದಿರುವ ವಿಶ್ವವಿದ್ಯಾಲಯದ ಹೆಸರು ಸೇರಿ ಇನ್ನಿತರ ವಿವರಗಳು ಲಭ್ಯವಾಗಲಿವೆ.

ರಾಜ್ಯದಲ್ಲಿ ಒಟ್ಟು 1.25 ಲಕ್ಷ ವಕೀಲರಿದ್ದು, ಸುಮಾರು 65 ಸಾವಿರ ವಕೀಲರು ವಕೀಲಿಕೆ ದೃಢೀಕರಣ ಪ್ರಮಾಣ ಪತ್ರವನ್ನು (ಸಿಒಪಿ ) ಪರಿಷತ್‌ಗೆ ನೀಡಿದ್ದಾರೆ. ಅವರಿಗೆ ಮಾತ್ರ ಸ್ಟಿಕ್ಕರ್‌ ನೀಡಲು ನಿರ್ಧರಿಸಲಾಗಿದೆ.

ಗೃಹ ಸಚಿವರಿಗೆ ಪತ್ರ

ಚೆಕ್‌ಪೋಸ್ಟ್‌ಗಳಲ್ಲಿ ವಕೀಲರ ಸ್ಟಿಕ್ಕರ್‌ ಇರುವುದು ಕಂಡುಬಂದರೆ ವಾಹನದ ಮಾಲೀಕರು ವಕೀಲರೋ ಅಲ್ಲವೋ ಎಂಬುದನ್ನು ಖಚಿತಪಡಿಕೊಳ್ಳಬೇಕು. ವಕೀಲರ ಪರಿಷತ್ತಿನಿಂದ ನೀಡಿರುವ ಗುರುತಿನ ಚೀಟಿ ಪಡೆದು ಪರೀಕ್ಷಿಸಬೇಕು. ಇಲ್ಲವೇ ಪರಿಷತ್‌ ವೆಬ್‌ಸೈಟ್‌ ಮೂಲಕ ಪರಿಶೀಲಿಸಬೇಕು. ವಾಹನ ಮಾಲೀಕರು ವಕೀಲರಲ್ಲದಿದ್ದರೆ ಸ್ಟಿಕ್ಕರ್‌ ತೆಗಿಸಬೇಕು ಎಂದು ಪರಿಷತ್‌ ವತಿಯಿಂದ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ.

ಒಂದು ವೇಳೆ ಅನಧಿಕೃತ ಸ್ಟಿಕ್ಕರ್‌ ಅಂಟಿಸಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಆಯುಕ್ತರು ಹಾಗೂ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ವಕೀಲರ ಪರಿಷತ್‌ ಒತ್ತಾಯಿಸಿದೆ.

ಸ್ಟಿಕ್ಕರ್‌ ದುರುಪಯೋಗ

ವಕೀಲರು ತಮ್ಮ ವಾಹನಗಳ ಮೇಲೆ ಅಳವಡಿಸುವ ನೆಕ್‌ ಬ್ಯಾಂಡ್‌ ಚಿಹ್ನೆ ಹಾಗೂ ಅಡ್ವೊಕೇಟ್‌ ಎಂಬುದಾಗಿ ಸ್ಟಿಕ್ಕರ್‌ ಅಂಟಿಸುವುದು ಸಾಮಾನ್ಯ, ಇದನ್ನು ಸಾರ್ವಜನಿಕವಾಗಿ ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ವಕೀಲರ ಹೆಸರು, ವಾಹನ ಸಂಖ್ಯೆ, ಪೋಟೋ ಇನ್ನಿತರ ಮಾಹಿತಿ ಇರುವುದಿಲ್ಲ. ಅದರ ಮುದ್ರಣ ಹಾಗೂ ಮಾರಾಟಕ್ಕೆ ಯಾವುದೇ ನಿಯಮಗಳೂ ಇಲ್ಲ. ಯಾರೂ ಬೇಕಾದರೂ ಸ್ಟಿಕ್ಕರ್‌ ಅಂಗಡಿಗೆ ಹೋಗಿ ಪಡೆಯಬಹುದು. ಇದರಿಂದ ವಕೀಲ ವೃತ್ತಿಯ ಪಾವಿತ್ರ್ಯತೆ ಹಾಳಾಗುತ್ತಿದೆ ಎಂಬ ಆರೋಪಗಳಿ ಕೇಳಿ ಬಂದಿವೆ.

ವಕೀಲರ ಸ್ಟಿಕ್ಕರ್‌ಗಳು ಸುಲಭವಾಗಿ ಸಿಗುವುದರಿಂದ ಯಾರೂ ಬೇಕಾದರೂ ಪಡೆದು ವಾಹನಕ್ಕೆ ಅಳವಡಿಸಬಹುದು. ಇಂಥ ಅನೇಕ ಪ್ರಕರಣಗಳು ಕಂಡುಬಂದಿದ್ದು, ವಕೀಲರ ಸ್ಟಿಕ್ಕರ್‌ ಬಳಕೆ ದುರುಪಯೋಗವಾಗುತ್ತಿದೆ. ವಕೀಲರ ಸಮುದಾಯಕ್ಕೆ ಅವಮಾನವಾಗುತ್ತಿದೆ ಎಂದು ಪರಿಷತ್‌ ಕಳವಳ ವ್ಯಕ್ತಪಡಿಸಿದೆ.

Read More
Next Story